


ಡೈಲಿವಾರ್ತೆ: 25/ಜೂ./2026


ಚೆಕ್ ಬೌನ್ಸ್ ಹಾಗೂ ಗ್ರಾಹಕ ಆಯೋಗದ ಆದೇಶ ಉಲ್ಲಂಘನೆ: ಅಮೃತ್ ಶೆಣೈಗೆ 3 ವರ್ಷ ಜೈಲು

ಉಡುಪಿ : ಗ್ರಾಹಕ ಆಯೋಗದ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಅವರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಮೂರು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಸಂತೋಷ್ ಪೈ ಅವರು ಅಮೃತ್ ಶೆಣೈ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ, ಉಡುಪಿಯಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ವೈಗರ್ ಅಪಾರ್ಟ್‌ಮೆಂಟ್‌ನ ಮನೆ ಸಂಖ್ಯೆ 304ನ್ನು ಅರ್ಜಿದಾರರ ಹೆಸರಿಗೆ ನೋಂದಣಿ ಮಾಡಿಕೊಡಬೇಕು ಅಥವಾ ಪರ್ಯಾಯವಾಗಿ 27.20 ಲಕ್ಷ ರೂ. ಮೊತ್ತವನ್ನು ವಾರ್ಷಿಕ ಶೇ.9 ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆದೇಶಿಸಿತ್ತು.
ಆದರೆ ಆಯೋಗದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಸಂತೋಷ್ ಪೈ ಅವರು ಎಕ್ಸಿಕ್ಯೂಷನ್ ಕೇಸ್ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಸೆಕ್ಷನ್ 72ರಡಿ ಆರೋಪಿಯು ಶಿಕ್ಷಾರ್ಹ ಅಪರಾಧ ಎಸಗಿರುವುದಾಗಿ ಪರಿಗಣಿಸಿ ಜೂನ್ 24ರಂದು ತೀರ್ಪು ನೀಡಿದೆ.
ತೀರ್ಪಿನಂತೆ ಅಮೃತ್ ಶೆಣೈ ಅವರಿಗೆ ಮೂರು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ, 1 ಲಕ್ಷ ರೂ. ದಂಡ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ಆರೋಪಿಯನ್ನು ಆಯೋಗದ ಮುಂದೆ ಹಾಜರುಪಡಿಸಲು ಬಂಧನ ವಾರಂಟ್ ಜಾರಿಗೊಳಿಸಲಾಗಿತ್ತು.
ಅದರಂತೆ ಗುರುವಾರ ಅಮೃತ್ ಶೆಣೈ ಅವರನ್ನು ಆಯೋಗದ ಮುಂದೆ ಹಾಜರುಪಡಿಸಲಾಗಿದ್ದು, ಆಯೋಗವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಳಿಕ ಅವರನ್ನು ಹಿರಿಯಡ್ಕ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.