


ಡೈಲಿವಾರ್ತೆ: 26/ಜೂ./2026


ಗಂಗೊಳ್ಳಿ: ಸ್ಟೆಲ್ಲಾ ಮಾರಿಸ್ ಶಾಲೆಯಲ್ಲಿ ಮೊಬೈಲ್ ಇ.ವಿ.ಎಂ ಮೂಲಕ ಡಿಜಿಟಲ್ ಶಾಲಾ ಸಂಸತ್ತು ಚುನಾವಣೆ – ರೋನಕ್ ನಾಯಕ, ತಸ್ಫೀಯಾ ಉಪನಾಯಕಿ

ಗಂಗೊಳ್ಳಿ: ಇಲ್ಲಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನ್ 24 ರಂದು 2026-27ನೇ ಸಾಲಿನ ಶಾಲಾ ಸಂಸತ್ತು ಚುನಾವಣೆಯನ್ನು ಅತ್ಯಂತ ವ್ಯವಸ್ಥಿತ ಹಾಗೂ ವಿನೂತನವಾಗಿ ಡಿಜಿಟಲ್ ಮಾದರಿಯಲ್ಲಿ ಆಯೋಜಿಸಲಾಗಿತ್ತು. ಸಾಂಪ್ರದಾಯಿಕ ಬ್ಯಾಲೆಟ್ ಪೇಪರ್ ಪದ್ಧತಿಯ ಬದಲಿಗೆ ಮೊಬೈಲ್ ಇ.ವಿ.ಎಂ (EVM) ತಂತ್ರಜ್ಞಾನವನ್ನು ಬಳಸುವ ಮೂಲಕ ಚುನಾವಣಾ ಪ್ರಕ್ರಿಯೆಗೆ ಆಧುನಿಕ ಸ್ಪರ್ಶ ನೀಡಲಾಗಿತ್ತು.
ವಿದ್ಯಾರ್ಥಿ ದೆಸೆಯಲ್ಲೇ ಸಂವಿಧಾನಬದ್ಧ ಮತದಾನದ ಹಕ್ಕು, ಚುನಾವಣಾ ಪ್ರಕ್ರಿಯೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಹಾಗೂ ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದಾತ್ತ ಉದ್ದೇಶದಿಂದ ಈ ಶಾಲಾ ಸಂಸತ್ ಚುನಾವಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ನಾಯಕ (SPL), ಉಪನಾಯಕ (ASPL) ಹಾಗೂ ವಿವಿಧ ಚಟುವಟಿಕೆಗಳ ಪದಾಧಿಕಾರಿಗಳ ಆಯ್ಕೆಗಾಗಿ ಪ್ರಜಾಪ್ರಭುತ್ವದ ನಿಯಮಾವಳಿಗಳಂತೆಯೇ ಈ ಪ್ರಕ್ರಿಯೆ ಜರುಗಿತು.
ಶಾಲೆಯ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹ ಮತ್ತು ಸಕ್ರಿಯತೆಯಿಂದ ಭಾಗವಹಿಸಿ, ಸರತಿಯ ಸಾಲಿನಲ್ಲಿ ನಿಂತು ಮೊಬೈಲ್ ಇ.ವಿ.ಎಂ ಮೂಲಕ ತಮ್ಮ ಅಮೂಲ್ಯವಾದ ಮತದಾನದ ಹಕ್ಕನ್ನು ಚಲಾಯಿಸಿದರು. ತಂತ್ರಜ್ಞಾನದ ಬಳಕೆಯಿಂದಾಗಿ ಮತದಾನ ಪ್ರಕ್ರಿಯೆ ಮುಗಿದ ತಕ್ಷಣವೇ ಮತಎಣಿಕೆ ಕಾರ್ಯ ನಡೆದು, ಅತ್ಯಂತ ಪಾರದರ್ಶಕವಾಗಿ ಫಲಿತಾಂಶವನ್ನು ಘೋಷಿಸಲಾಯಿತು.
ವಿಜೇತರ ವಿವರ:
ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯ ಫಲಿತಾಂಶದ ಪ್ರಕಾರ, ಅತ್ಯಧಿಕ ಮತಗಳನ್ನು ಪಡೆದ ರೋನಕ್ ಖಾವಿ೯ ಅವರು ಶಾಲಾ ನಾಯಕನಾಗಿ (SPL) ಹಾಗೂ ಕು. ತಸ್ಫೀಯಾ ಅವರು ಶಾಲಾ ಉಪನಾಯಕಿಯಾಗಿ (ASPL) ಅತ್ಯುನ್ನತ ಬಹುಮತದೊಂದಿಗೆ ಆಯ್ಕೆಯಾದರು.
ನೂತನವಾಗಿ ಆಯ್ಕೆಯಾದ ಶಾಲಾ ಸಂಸತ್ತಿನ ಪದಾಧಿಕಾರಿಗಳಿಗೆ ಶಾಲಾ ಮುಖ್ಯ ಶಿಕ್ಷಕಿ ಧಮ೯ಭಗಿನಿ ವಿಜಯ ಕ್ರಾಸ್ತಾ ಹಾಗೂ ಶಾಲೆಯ ಸಮಸ್ತ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಹಾರ್ದಿಕವಾಗಿ ಅಭಿನಂದನೆ ಸಲ್ಲಿಸಿ, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಶುಭ ಹಾರೈಸಿದರು.