ಡೈಲಿವಾರ್ತೆ: 27/ಜೂ./2026

ಘಜ್ನಿ ನಂತರ ದೇಶ ಲೂಟಿ ಮಾಡಿದ್ದು ಬಿಜೆಪಿಯವರೇ: ರಾಮಮಂದಿರ ದೇಣಿಗೆ ವಿಚಾರದಲ್ಲಿ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ

​ಬೆಂಗಳೂರು: ಅಯೋಧ್ಯೆಯ ರಾಮಮಂದಿರ ನಿರ್ಮಾಣದ ದೇಣಿಗೆ ಸಂಗ್ರಹಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ದೇಶದ ಇತಿಹಾಸದಲ್ಲಿ ಮೊಹಮ್ಮದ್ ಘಜ್ನಿ ಬಿಟ್ಟರೆ ದೇಶವನ್ನು ಅತಿ ಹೆಚ್ಚು ಲೂಟಿ ಮಾಡಿದ್ದು ಬಿಜೆಪಿಯವರೇ ಎಂದು ಅತ್ಯಂತ ಗಂಭೀರವಾಗಿ ವಾಗ್ದಾಳಿ ನಡೆಸಿದ್ದಾರೆ.

​ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಟ್ರಸ್ಟ್‌ಗೆ ಸಂದಾಯವಾಗಿರುವ ನೂರಾರು ಕೋಟಿ ರೂಪಾಯಿ ದೇಣಿಗೆಗೆ ಯಾವುದೇ ನಿಖರ ಲೆಕ್ಕವಿಲ್ಲ ಎಂದು ನೇರ ಆರೋಪ ಮಾಡಿದರು.

​900 ಕೋಟಿ ದೇಣಿಗೆಗೆ ಇಲ್ಲ ಲೆಕ್ಕ: ಅಂಬಾನಿ ಹೆಸರು ಪ್ರಸ್ತಾಪ:

​ಶಿವಸೇನೆಯ ಸಂಜಯ್ ರಾವತ್ ಎತ್ತಿರುವ ರಾಮಮಂದಿರ ದೇಣಿಗೆ ವಿವಾದದ ಕುರಿತು ಪ್ರತಿಕ್ರಿಯಿಸಿದ ಹರಿಪ್ರಸಾದ್, ದೇಶದ ಪ್ರಮುಖ ಉದ್ಯಮಿ ಮುಕೇಶ್ ಅಂಬಾನಿ ಅವರು ಮಂದಿರ ನಿರ್ಮಾಣಕ್ಕಾಗಿ ನೀಡಿದ್ದಾರೆ ಎನ್ನಲಾದ 900 ಕೋಟಿ ರೂಪಾಯಿ ದೇಣಿಗೆಗೆ ಯಾವುದೇ ಪಾರದರ್ಶಕ ಲೆಕ್ಕವಿಲ್ಲ ಎಂದು ದೂರಿದರು.
​ಬಿಜೆಪಿಯವರು ಸದಾ ಇತಿಹಾಸದ ಮೊಹಮ್ಮದ್ ಘಜ್ನಿಯ ಲೂಟಿಯ ಬಗ್ಗೆ ಮಾತನಾಡುತ್ತಾರೆ. ಆದರೆ, ವಾಸ್ತವದಲ್ಲಿ ಘಜ್ನಿ ನಂತರ ದೇಶದ ಸಂಪತ್ತನ್ನು ಹಾಗೂ ದೇವರ ಹೆಸರಿನಲ್ಲಿ ಜನರ ಭಾವನೆಗಳನ್ನು ಲೂಟಿ ಮಾಡಿದ್ದು ಇದೇ ಬಿಜೆಪಿಯವರು. ಈ ಹಿಂದೆ ರಾಮಮಂದಿರ ಕಟ್ಟುತ್ತೇವೆ ಎಂದು ಇಟ್ಟಿಗೆ ಮತ್ತು ಹಣ ಸಂಗ್ರಹಿಸಿ ಲೂಟಿ ಮಾಡಲಾಗಿತ್ತು. ಈಗಲೂ ಅದೇ ಪುನರಾವರ್ತನೆಯಾಗುತ್ತಿದೆ ಎಂದು ಕಿಡಿಕಾರಿದರು.

​ಪೇಜಾವರ ಶ್ರೀಗಳ ಲೆಕ್ಕದ ಪ್ರಸ್ತಾಪ; ಜೋಶಿಗೆ ಸವಾಲು

​ಇದೇ ಸಂದರ್ಭದಲ್ಲಿ ಉಡುಪಿ ಪೇಜಾವರ ಶ್ರೀಗಳು ಮಂದಿರದ ಲೆಕ್ಕ ಕೇಳಿರುವ ವಿಚಾರವನ್ನು ಪ್ರಸ್ತಾಪಿಸಿದ ಹರಿಪ್ರಸಾದ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಹರಿಹಾಯ್ದರು.
​ಈಗ ಪೇಜಾವರ ಶ್ರೀಗಳೇ ದೇಣಿಗೆಯ ಲೆಕ್ಕ ಕೇಳಿದ್ದಾರೆ. ಶ್ರೀಗಳ ಮಾತಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಉತ್ತರವೇನೆ? ಅವರು ಶ್ರೀಗಳ ವಿರುದ್ಧವಾಗಿದ್ದಾರೆಯೇ? ಜೋಶಿ ಅವರು ಕೇಂದ್ರದ ಮಂತ್ರಿಗಳಾಗಿರಬಹುದು, ಅಪಾರ ಜ್ಞಾನದ ಮೂರ್ತಿಯಾಗಿರಬಹುದು. ಆದರೆ, ಅವರ ದ್ವಂದ್ವ ನಿಲುವುಗಳು ಈಗ ಬಹಿರಂಗವಾಗುತ್ತಿವೆ ಎಂದು ಪ್ರಶ್ನಿಸಿದರು.

​ರಾಜಕೀಯ ನಾಯಕರ ದ್ವಂದ್ವ ನಿಲುವಿಗೆ ಟೀಕೆ:

ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ತೊರೆದಾಗ ಸಚಿವ ಪ್ರಹ್ಲಾದ್ ಜೋಶಿ ಅವರು ಆಡಿದ ಮಾತುಗಳನ್ನು ನೆನಪಿಸಿದ ಹರಿಪ್ರಸಾದ್, ಅಂದು ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿದ್ದ ಜೋಶಿ, ಇಂದು ರಾಜಕೀಯ ಲಾಭಕ್ಕಾಗಿ ಅವರ ಪಾದಪೂಜೆ ಮಾಡುತ್ತಿದ್ದಾರೆ. ರಾಮಮಂದಿರ ಟ್ರಸ್ಟ್‌ನವರು ಸಾರ್ವಜನಿಕ ಹಣಕ್ಕೆ ಲೆಕ್ಕ ಕೊಡಲು ನಿರಾಕರಿಸುತ್ತಿದ್ದಾರೆ. ಇವರು ಸ್ವತಃ ಶ್ರೀರಾಮನನ್ನೂ ಬಿಟ್ಟಿಲ್ಲ, ದೇವರ ಹೆಸರಲ್ಲೂ ಕಳ್ಳತನ ಮತ್ತು ಲೂಟಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.