ಡೈಲಿವಾರ್ತೆ: 27/ಜೂ./2026

ಮಂಗಳೂರು: ಕಾಲೇಜು ಬಸ್ ಅಪಘಾತಕ್ಕೆ ಬೈಕ್ ಸವಾರ ವಿದ್ಯಾರ್ಥಿ ಬಲಿ – ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ!

​ಮಂಗಳೂರು: ಕೊಣಾಜೆಯಿಂದ ಮಂಗಳೂರು ಕಡೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಪಿ.ಎ. ಕಾಲೇಜಿನ ಬಸ್ ನಾಟೆಕಲ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಚರಂಡಿಗೆ ವಾಲಿದ ಪರಿಣಾಮ, ಬೈಕ್ ಸವಾರನಾಗಿದ್ದ ವಿದ್ಯಾರ್ಥಿಯೊಬ್ಬರು ಮೃತಪಟ್ಟು, ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಧಾರುಣ ಘಟನೆ ಶನಿವಾರ ಸಂಭವಿಸಿದೆ.

​ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ, ವಿದ್ಯಾರ್ಥಿ ಪ್ರಜ್ವಲ್ (31) ಚಿಕಿತ್ಸೆ ಫಲಕಾರಿಯಾಗದೆ ದೇರಳಕಟ್ಟೆಯ ಕನಚೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

​ಓವರ್‌ಟೇಕ್ ಮಾಡಲು ಹೋಗಿ ಸಂಭವಿಸಿದ ದುರಂತ:

​ಪ್ರಾಥಮಿಕ ಮಾಹಿತಿಗಳ ಪ್ರಕಾರ, ಪಿ.ಎ. ಕಾಲೇಜು ಬಸ್ ನಾಟೆಕಲ್ ತಿರುವಿನಲ್ಲಿ ದ್ವಿಚಕ್ರ ವಾಹನವನ್ನು ಓವರ್‌ಟೇಕ್ ಮಾಡಲು ಯತ್ನಿಸಿದೆ. ಈ ವೇಗ ಹಾಗೂ ರಭಸದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿಯ ಚರಂಡಿಗೆ ವಾಲಿ ನಿಂತಿದೆ. ದುರದೃಷ್ಟವಶಾತ್, ಇದೇ ವೇಳೆ ಬೈಕ್ ಸವಾರ ಪ್ರಜ್ವಲ್ ಅವರು ಬಸ್‌ನ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.

​ಸಾರ್ವಜನಿಕರ ತಕ್ಷಣದ ರಕ್ಷಣೆ ಮತ್ತು ಆಸ್ಪತ್ರೆಗೆ ದಾಖಲಾತಿ:

ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಕೂಡಲೇ ಕ್ರೇನ್ ತರಿಸಿ ಬಸ್‌ನ್ನು ಮೇಲಕ್ಕೆತ್ತುವ ಮೂಲಕ ಅದರ ಅಡಿಯಲ್ಲಿ ಸಿಲುಕಿದ್ದ ಪ್ರಜ್ವಲ್ ಅವರನ್ನು ಅತ್ಯಂತ ಶ್ರಮವಹಿಸಿ ಹೊರತೆಗೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಸ್ಥಳೀಯ ಕನಚೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

​ಅಪಘಾತದ ಸಮಯದಲ್ಲಿ ಬಸ್‌ನಲ್ಲಿದ್ದ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

​ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.