


ಡೈಲಿವಾರ್ತೆ: 27/ಜೂ./2026


ರಾಮಮಂದಿರ ಅವ್ಯವಹಾರ ಆರೋಪ: ಟ್ರಸ್ಟಿ ಪೇಜಾವರ ಶ್ರೀಗಳನ್ನೂ ತನಿಖೆಗೆ ಒಳಪಡಿಸಲು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ ಆಗ್ರಹ

ಉಡುಪಿ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರಗಳ ಕುರಿತು ಸಮಗ್ರ ತನಿಖೆಯಾಗಬೇಕು ಮತ್ತು ರಾಮಮಂದಿರದ ಟ್ರಸ್ಟಿಯಾಗಿರುವ ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನೂ ಈ ತನಿಖೆಯ ವ್ಯಾಪ್ತಿಗೆ ತರಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ನಾಗೇಂದ್ರ ಪುತ್ರನ್ ಕೋಟ ಅವರು ಗಂಭೀರವಾಗಿ ಆಗ್ರಹಿಸಿದ್ದಾರೆ.
ಅವ್ಯವಹಾರ ಗೊತ್ತಿದ್ದೂ ಮೌನ ವಹಿಸಿದ್ದು ಅಪರಾಧ:
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ನಾಗೇಂದ್ರ ಪುತ್ರನ್ ರಾಮಮಂದಿರದಲ್ಲಿ ಅವ್ಯವಹಾರ ನಡೆದಿರುವುದು ಪೇಜಾವರ ಶ್ರೀಗಳಿಗೆ ಮೊದಲೇ ತಿಳಿದಿತ್ತು ಎಂಬುದು ಅವರ ಇತ್ತೀಚಿನ ಹೇಳಿಕೆಗಳಿಂದಲೇ ಸ್ಪಷ್ಟವಾಗುತ್ತದೆ. ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ತಾವು ಮೊದಲೇ ಸೂಚಿಸಿದ್ದಾಗಿ ಶ್ರೀಗಳು ಹೇಳಿದ್ದಾರೆ. ಅಂದರೆ, ಅಲ್ಲಿ ಅಕ್ರಮ ನಡೆದಿರುವುದು ಅವರಿಗೆ ಮೊದಲೇ ಗೊತ್ತಿದ್ದರೂ ಅವರು ಅದನ್ನು ಸಾರ್ವಜನಿಕವಾಗಿ ವಿರೋಧಿಸದೆ ಮೌನ ವಹಿಸಿದ್ದೇಕೆ? ತಪ್ಪು ನಡೆಯುತ್ತಿರುವುದು ಗೊತ್ತಿದ್ದೂ ಸುಮ್ಮನಿರುವುದು ಕೂಡ ಕಾನೂನಿನ ದೃಷ್ಟಿಯಲ್ಲಿ ಅಪರಾಧವೇ ಆಗುತ್ತದೆ ಎಂದು ಆಕ್ಷೇಪ ಎತ್ತಿದ್ದಾರೆ.
ರಾಮಮಂದಿರ ಟ್ರಸ್ಟ್‌ನ ಪ್ರಮುಖ ಜವಾಬ್ದಾರಿಯುತ ಸ್ಥಾನದಲ್ಲಿರುವ ಪೇಜಾವರ ಶ್ರೀಗಳು ಅಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಅನಾಚಾರಗಳನ್ನು ತೀವ್ರವಾಗಿ ಖಂಡಿಸಬೇಕಿತ್ತು. ಆದರೆ, ಅವರು ಮೌನ ವಹಿಸುವ ಮೂಲಕ ಪರೋಕ್ಷವಾಗಿ ಈ ಅವ್ಯವಹಾರಗಳಿಗೆ ಬೆಂಬಲ ನೀಡಿದಂತಾಗಿದೆಯೇ ಎಂಬ ಸಂಶಯ ಮೂಡುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
ರಾಮಮಂದಿರಕ್ಕೆ ದೇಣಿಗೆ ನೀಡುವ ಬದಲು ಸಮಾಜ ಸೇವೆಗೆ ಆದ್ಯತೆ ನೀಡಿ ಎಂದು ಪೇಜಾವರ ಶ್ರೀಗಳು ಇತ್ತೀಚೆಗೆ ನೀಡಿರುವ ಹೇಳಿಕೆಯೇ ಅಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ಸಾಕ್ಷಿಯಾಗಿದೆ. ಅಲ್ಲಿನ ಅಕ್ರಮಗಳು ಮನವರಿಕೆಯಾದ ಹಿನ್ನೆಲೆಯಲ್ಲೇ ಶ್ರೀಗಳು ಇಂತಹ ಹೇಳಿಕೆ ನೀಡಿದ್ದಾರೆ ಎಂದು ಪುತ್ರನ್ ವಿಶ್ಲೇಷಿಸಿದ್ದಾರೆ.
ಬಿಜೆಪಿಗೆ ಹಿಂದುತ್ವ ಕೇವಲ ವೋಟ್ ಬ್ಯಾಂಕ್:
ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡರು, ಬಿಜೆಪಿಯವರು ಆಡಳಿತದ ಹಪಹಪಿಗೆ ಪ್ರಭು ಶ್ರೀರಾಮನನ್ನೂ ಬಿಡಲಿಲ್ಲ. ಬಿಜೆಪಿಗೆ ಹಿಂದೂ ಧರ್ಮ ಮತ್ತು ಹಿಂದುತ್ವ ಎನ್ನುವುದು ಕೇವಲ ಚುನಾವಣೆಗಾಗಿ ಬಳಸುವ ‘ಮತ ಬ್ಯಾಂಕ್’ ಅಷ್ಟೇ ಹೊರತು ಅವರಿಗೆ ಧರ್ಮದ ಮೇಲೆ ನಿಜವಾದ ಗೌರವವಿಲ್ಲ. ಲೂಟಿ ಮಾಡುವುದೇ ಬಿಜೆಪಿಯ ಮೂಲ ಸಿದ್ಧಾಂತವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಧಾರ್ಮಿಕ ಶುದ್ಧತೆಗೆ ಕಾಂಗ್ರೆಸ್ ಬದ್ಧ:
ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗೂ ಹಿಂದೂ ದೇವರಿಗೆ ನಿಜವಾದ ಗೌರವ ಕೊಡುವ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ಪ್ರತಿಪಾದಿಸಿದ ಅವರು ಹಿಂದೆ ದೇಶದ ಹಳ್ಳಿ-ಕೇರಿಗಳಲ್ಲಿ ಹಿಂದುತ್ವದ ಧಾರ್ಮಿಕ ಆಚರಣೆಗಳು ಅತ್ಯಂತ ಶುದ್ಧ ಹಾಗೂ ಸೌಹಾರ್ದಯುತವಾಗಿ ನಡೆಯುತ್ತಿದ್ದವು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತನ್ನ ರಾಜಕೀಯ ಲಾಭಕ್ಕಾಗಿ ದೇಶದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸುತ್ತಿದೆ. ಕಾಂಗ್ರೆಸ್ ಪಕ್ಷ ಎಂದಿಗೂ ದೇವರ ಹೆಸರಿನಲ್ಲಿ ಜನರಿಗೆ ವಂಚನೆ ಮಾಡಿದ ಇತಿಹಾಸ ಹೊಂದಿಲ್ಲ. ಧರ್ಮದ ಹೆಸರಿನಲ್ಲಿ ಜನರನ್ನು ವಂಚಿಸುವುದು ಕೇವಲ ಬಿಜೆಪಿಯ ಕೆಲಸ ಎಂದು ನಾಗೇಂದ್ರ ಪುತ್ರನ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.