


ಬಾರ್ಕೂರು: ಕಚ್ಚೂರಿನಲ್ಲಿ ಶ್ರೀ ಮಾಲ್ತಿದೇವಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ: ಸಹಕಾರಿ ಸಂಸ್ಥೆಗಳು ತಳಸಮುದಾಯಗಳ ಆರ್ಥಿಕ ಶಕ್ತಿಯ ಕೇಂದ್ರ – ಸಂಸದ ಕೋಟ ಶ್ರೀನಿವಾಸ ಪೂಜಾರಿ

ಬ್ರಹ್ಮಾವರ, ಜೂ. 29: ತಳಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.



ಅವರು ಜೂನ್ 28ರ ಭಾನುವಾರದಂದು ಕಚ್ಚೂರು ಬಾರ್ಕೂರಿನ ಶ್ರೀ ಮಾಲ್ತಿದೇವಿ ಸಭಾಭವನದಲ್ಲಿ ಜರುಗಿದ ‘ಕಚ್ಚೂರು ಶ್ರೀ ಮಾಲ್ತಿದೇವಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ)’ ಇದರ ನೂತನ ಕಚೇರಿ ಲೋಕಾರ್ಪಣೆ ಹಾಗೂ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಸಂಸ್ಥೆಗಳು ಕೇವಲ ಸಾಲ ನೀಡುವ ಕೇಂದ್ರಗಳಲ್ಲ ಸಮಾಜದ ಸ್ವಾವಲಂಬನೆ ಮತ್ತು ಅಭಿವೃದ್ಧಿಗೆ ಬಲ ತುಂಬುವ ಶಕ್ತಿಕೇಂದ್ರಗಳಾಗಿವೆ ಎಂದು ಹೇಳಿದರು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಂಸ್ಥೆಯ ಬೆಳವಣಿಗೆಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.


ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ನಿಯಮಿತ ಬಡ್ಡಿದರದಲ್ಲಿ ದೊರೆಯುವ ಸಾಲ ಸೌಲಭ್ಯವನ್ನು ಜನರು ಸದುಪಯೋಗಪಡಿಸಿಕೊಂಡರೆ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಸಂಸ್ಥೆಯ ಅಭಿವೃದ್ಧಿಗೆ ಹೆಚ್ಚುವರಿಯಾಗಿ ರೂ.20 ಲಕ್ಷ ಅನುದಾನ ತರಲು ಪ್ರಯತ್ನಿಸುವುದಾಗಿ ಹೇಳಿದರು.


ಸಂಸ್ಥೆಯ ನೂತನ ಲಾಂಛನ (ಲೋಗೋ) ಅನಾವರಣಗೊಳಿಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಂ. ಎ. ಗಫೂರ್ ಮಾತನಾಡಿ ಸಹಕಾರಿ ರಂಗವು ಧ್ವನಿ ಇಲ್ಲದವರ ಸ್ವಾಭಿಮಾನದ ಬದುಕಿಗೆ ಶಕ್ತಿಯಾಗಲಿ. ಸಂವಿಧಾನದ ಆಶಯದಂತೆ ಮೂಡಿಬಂದಿರುವ ಈ ಸಂಸ್ಥೆಯ ಹಿಂದೆ ಗೋಕುಲ್ ದಾಸ್ ಬಾರ್ಕೂರು ತಂಡದ ಶ್ರಮ ಶ್ಲಾಘನೀಯ ಎಂದು ನುಡಿದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಠೇವಣಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕುಗಳ ವೇಗಕ್ಕೆ ಸರಿಸಮಾನವಾಗಿ ಬೆಳೆದಿರುವ ಸಹಕಾರಿ ಕ್ಷೇತ್ರವು ಕರಾವಳಿಯ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿದೆ. ಕೇಂದ್ರದ ಹೊಸ ಸಹಕಾರ ಇಲಾಖೆಯು ಈ ರಂಗದಲ್ಲಿ ಆರ್ಥಿಕ ಶಿಸ್ತು ತಂದಿದೆ ಎಂದರು.

ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ
ರಮೇಶ್ ಕಾಂಚನ್ ಮಾತನಾಡಿ ಧಾರ್ಮಿಕ ಕ್ಷೇತ್ರದಂತೆ ಸಹಕಾರಿ ಸಂಸ್ಥೆಯೂ ಅತ್ಯುನ್ನತ ಮಟ್ಟಕ್ಕೆ ಬೆಳೆಯಲಿ. ಕ್ಷೇತ್ರಕ್ಕೆ ರೂ. 2 ಕೋಟಿ ಅನುದಾನ ತರಲು ಜಂಟಿ ಶ್ರಮ ವಹಿಸಲಾಗುವುದು ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷರಾದ ಕಚ್ಚೂರು ಗೋಕುಲ್ ದಾಸ್ ಬಾರ್ಕೂರು ಮಾತನಾಡಿ, ನಮ್ಮ ಸಮುದಾಯದವರ ಸಹಕಾರ ಹಾಗೂ ಕರ್ತವ್ಯ ಬದ್ಧತೆಯಿಂದ ಶ್ರೀ ಕ್ಷೇತ್ರವು ಜಾತ್ಯಾತೀತವಾಗಿ ಬೆಳೆದು ನಿಂತಿದೆ. ಮುಂದಿನ ದಿನಗಳಲ್ಲಿ ಪ್ರತೀ ತಾಲೂಕಿನಲ್ಲೂ ನಮ್ಮ ಸಮುದಾಯ ಭವನ ನಿರ್ಮಾಣವಾಗುವಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿ, ಎಲ್ಲರನ್ನೂ ಸ್ವಾಗತಿಸಿದರು.
ಕಚ್ಚೂರು ಶ್ರೀ ಕ್ಷೇತ್ರದ ಅಧ್ಯಕ್ಷ ಶಿವಪ್ಪ ನಂತೂರು ಕಚೇರಿಯ ದೀಪ ಪ್ರಜ್ವಲನೆ ಮಾಡಿದರು.

ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಗ್ರಾಹಕರಿಗೆ ಉಳಿತಾಯ ಖಾತೆ ಪುಸ್ತಕ ವಿತರಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರದ ಗುರಿಕಾರ ಕಮಲಾಕ್ಷ ಹೆಚ್., ಉದ್ಯಮಿ ಕುತ್ಯಾರು ನವೀನ್ ಶೆಟ್ಟಿ, ಬಾರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ. ಶಾಂತರಾಮ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಪ್ರಬಂಧಕಿ ರೂಪರಾಣಿ ವಿ. ಶೆಟ್ಟಿ, ಸೊಸೈಟಿಯ ಉಪಾಧ್ಯಕ್ಷ ರಘುರಾಮ ಪುತ್ತೂರು ಹಾಗೂ ಆಡಳಿತ ಮಂಡಳಿಯ ಸರ್ವ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಅನುಷಾ ಮಣಿಪಾಲ ಪ್ರಾರ್ಥಿಸಿದರು, ಪ್ರಭಾಕರ್ ಮಣೂರು ಕಾರ್ಯಕ್ರಮ ನಿರೂಪಿಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ರಾಹುಲ್ ಧನ್ಯವಾದ ಸಮರ್ಪಿಸಿದರು.