ಡೈಲಿವಾರ್ತೆ: 30/ಜೂ./2026

‘ಖೈರು ಉಮ್ಮ’ ಉತ್ತಮ ಸಮುದಾಯ ಜಾಗೃತಿ ಅಭಿಯಾನಕ್ಕೆ ಚಾಲನೆ: ಕೋಡಿ ಕನ್ಯಾಣ, ಪಾರಂಪಳ್ಳಿ, ಕೋಟ ಪಡುಕರೆಯಲ್ಲಿ ಯಶಸ್ವಿ ತರಗತಿ

​ಕೋಟ: ಸುನ್ನೀ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (SMA) ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾದ “ಖೈರು ಉಮ್ಮ” ಉತ್ತಮ ಸಮುದಾಯ ಜಾಗೃತಿ ಅಭಿಯಾನದ ಅಂಗವಾಗಿ ಪ್ರತಿಯೊಂದು ಮೊಹಲ್ಲಾಗಳಲ್ಲಿ ನಡೆಯುವ ‘ಸಮುದಾಯದತ್ತ’ ಕಾರ್ಯಕ್ರಮಕ್ಕೆ ಜೂನ್ 26 ರಂದು ಚಾಲನೆ ನೀಡಲಾಯಿತು.

​ಎಂ.ಜೆ.ಎಂ. ಕೋಡಿ ಕನ್ಯಾಣ, ಪಾರಂಪಳ್ಳಿ ಹಾಗೂ ಕೋಟ ಪಡುಕರೆ ಮೊಹಲ್ಲಾಗಳಲ್ಲಿ ಈ ವಿಶೇಷ ಜಾಗೃತಿ ಅಭಿಯಾನದ ತರಗತಿಗಳನ್ನು ಬಹುಮಾನ್ಯರಾದ ಸಿದ್ದೀಕ್ ಸಖಾಫಿ ಪಜಿರ್ ಅವರು ನಡೆಸಿಕೊಡುವ ಮೂಲಕ ಚಾಲನೆ ನೀಡಿದರು. ಎಸ್.ಎಂ.ಎ. ಜಿಲ್ಲಾಧ್ಯಕ್ಷರ ಗೌರವಾನ್ವಿತ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆ ಹಾಗೂ ಯಶಸ್ವಿಯಾಗಿ ಮೂಡಿಬಂದವು.

​ಸಮುದಾಯದ ಪ್ರಸ್ತುತ ಸವಾಲುಗಳ ಕುರಿತು ಜಾಗೃತಿ:

ಪ್ರಸ್ತುತ ಸಮಾಜದಲ್ಲಿ ತಲೆದೂರುತ್ತಿರುವ ಹಲವು ಬಗೆಯ ಅನಾಚಾರಗಳು, ಕಳವಳಕಾರಿಯಾಗಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು, ಕೌಟುಂಬಿಕ ಕಲಹ ಹಾಗೂ ವಿವಾಹ ವಿಚ್ಛೇದನ (ಡೈವೋರ್ಸ್) ಸಮಸ್ಯೆಗಳ ಬಗ್ಗೆ ಕಾರ್ಯಕ್ರಮದಲ್ಲಿ ಗಂಭೀರ ಚರ್ಚೆ ನಡೆಸಲಾಯಿತು. ಯುವ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಮಾದಕದ್ರವ್ಯ ವ್ಯಸನ, ಸಮಾಜವನ್ನು ಹಾಳುಗೆಡವುತ್ತಿರುವ ಆಡಂಭರದ ಜೀವನ ಶೈಲಿ ಮತ್ತು ದುಂದು ವೆಚ್ಚಗಳ ವಿರುದ್ಧ ಸಮುದಾಯವನ್ನು ಜಾಗೃತಗೊಳಿಸುವ ಕಿರು ಪ್ರಯತ್ನ ಈ ಅಭಿಯಾನದ್ದಾಗಿದೆ.
​ಇದೇ ವೇಳೆ, ಸಜ್ಜನರ ಸ್ಮರಣೆಯ ಹಿನ್ನೆಲೆಯಲ್ಲಿ ನಡೆಯುವ ಪವಿತ್ರ ಉರೂಸ್ ಕಾರ್ಯಕ್ರಮಗಳ ಸುತ್ತ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅನಾಚಾರಗಳ ಬಗ್ಗೆಯೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.