ಡೈಲಿವಾರ್ತೆ: 30/ಜೂ./2026

ಇಂದಿನಿಂದ ರಾಜ್ಯಾದ್ಯಂತ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಆರಂಭ: ಬೆಂಗಳೂರು ನಗರ ಜಿಲ್ಲಾಡಳಿತದಿಂದ ವಿಶೇಷ ಸಹಾಯವಾಣಿ ಸ್ಥಾಪನೆ

ಬೆಂಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (SIR) ಪ್ರಕ್ರಿಯೆಯು ಜೂನ್ 30ರಿಂದ (ಇಂದು) ಅಧಿಕೃತವಾಗಿ ಆರಂಭವಾಗಿದೆ. ಜುಲೈ 29ರವರೆಗೆ ಒಂದು ತಿಂಗಳ ಕಾಲ ನಡೆಯಲಿರುವ ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ದೂರು ಹಾಗೂ ಗೊಂದಲಗಳ ನಿವಾರಣೆಗಾಗಿ ಬೆಂಗಳೂರು ನಗರ ಜಿಲ್ಲಾಡಳಿತವು ವಿಶೇಷ ಸಹಾಯವಾಣಿ ಕೇಂದ್ರ, ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ಸೌಲಭ್ಯವನ್ನು ಜಾರಿಗೆ ತಂದಿದೆ.
ಈ ಕುರಿತು ಮಾಹಿತಿ ನೀಡಿರುವ ಅಪರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್ ಅವರು, “ಸಾರ್ವಜನಿಕರ ಅಹವಾಲುಗಳ ನಿವಾರಣೆ, ದೂರು ಸಲ್ಲಿಕೆ ಹಾಗೂ ಸ್ಪಷ್ಟೀಕರಣಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.


​ಮನೆ ಮನೆಗೆ ಬರಲಿದ್ದಾರೆ ಚುನಾವಣಾಧಿಕಾರಿಗಳು (BLO)
​ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ವೋಟರ್ ಐಡಿಯಲ್ಲಿ ಹೆಸರು, ವಿಳಾಸ ತಿದ್ದುಪಡಿ ಮಾಡುವುದು, 18 ವರ್ಷ ತುಂಬಿದ ಹೊಸ ಮತದಾರರ ಹೆಸರು ಸೇರ್ಪಡೆ, ವಲಸೆ ಹೋದವರು ಅಥವಾ ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಬಿಎಲ್‌ಒಗಳು ಮನೆಗೆ ಬಂದಾಗ ಎಸ್‌ಐಆರ್ (SIR) ಅರ್ಜಿಯನ್ನು ನೀಡಲಿದ್ದಾರೆ.

ಸಲ್ಲಿಸಬೇಕಾದ ಅಗತ್ಯ ದಾಖಲೆಗಳು:

ಸಾರ್ವಜನಿಕರು ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ, ಸಹಿ ಹಾಕಿ, ಈ ಕೆಳಗಿನ ದಾಖಲೆಗಳನ್ನು ಸ್ಥಳದಲ್ಲೇ ಅಧಿಕಾರಿಗಳಿಗೆ ನೀಡಬೇಕು:
​ಕುಟುಂಬ ಸದಸ್ಯರ ಗುರುತಿನ ಚೀಟಿ / ವೋಟರ್ ಐಡಿ
​ಆಧಾರ್ ಕಾರ್ಡ್
​ವಾಸಸ್ಥಳ ದೃಢೀಕರಣ ಪತ್ರ
​ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

​ಗಮನಿಸಿ: ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಹೆಸರು ನೋಂದಣಿಯಾಗಿದ್ದರೆ ಅಥವಾ ವಂಶಾವಳಿ ಜೋಡಣೆಯಾಗದಿದ್ದರೆ ಅಂತಹ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.


​ಸಹಾಯವಾಣಿ ಹಾಗೂ ದೂರು ಸಲ್ಲಿಕೆ ವಿವರಗಳು
​ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಾದ ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ಕ್ಷೇತ್ರಗಳ ಸಾರ್ವಜನಿಕರು ಈ ಕೆಳಗಿನ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು:
​ಸಹಾಯವಾಣಿ ಸಂಖ್ಯೆ: 080-22967200 (ಕಚೇರಿ ವೇಳೆಯಲ್ಲಿ ಕರೆ ಮಾಡಬಹುದು)
​ಇ-ಮೇಲ್ ವಿಳಾಸ: [email protected]
​ಸಾಮಾಜಿಕ ಜಾಲತಾಣಗಳು:
​ಫೇಸ್‌ಬುಕ್: Deputy Commissioner, Bengaluru Urban
​ಇನ್‌ಸ್ಟಾಗ್ರಾಮ್: dc_bangalore_urban
​ಎಕ್ಸ್ (ಟ್ವಿಟರ್): DC_blrurban
​ಚುನಾವಣಾ ಆಯೋಗದ ಅಧಿಕೃತ ವೇಳಾಪಟ್ಟಿ
​ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರ ಪ್ರಕಾರ, ಈ ಮಹತ್ವದ ಕಾರ್ಯಕ್ಕೆ ರಾಜ್ಯಾದ್ಯಂತ ಸಿಬ್ಬಂದಿಗೆ ಈಗಾಗಲೇ ಸೂಕ್ತ ತರಬೇತಿ ನೀಡಲಾಗಿದ್ದು, ಪ್ರಕ್ರಿಯೆಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ:

ದಿನಾಂಕ / ಅವಧಿಪ್ರಕ್ರಿಯೆಯ ವಿವರ:
ಜೂನ್ 30 ರಿಂದ ಜುಲೈ 29ಬಿಎಲ್‌ಒಗಳಿಂದ ಮನೆ ಮನೆಗೆ ಭೇಟಿ, ಮಾಹಿತಿ ಮತ್ತು ದಾಖಲೆ ಸಂಗ್ರಹಣೆ.
ಆಗಸ್ಟ್ 5ಕರಡು ಮತದಾರರ ಪಟ್ಟಿ ಪ್ರಕಟಣೆ.
ಆಗಸ್ಟ್ 5 ರಿಂದ ಸೆಪ್ಟೆಂಬರ್ 4ಕರಡು ಪಟ್ಟಿಗೆ ಆಕ್ಷೇಪಣೆ ಮತ್ತು ಸಲಹೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ.
ಆಗಸ್ಟ್ 5 ರಿಂದ ಅಕ್ಟೋಬರ್ 3ಹಕ್ಕು ಮತ್ತು ಆಕ್ಷೇಪಣೆಗಳ ವಿಚಾರಣೆ ಹಾಗೂ ವಿಲೇವಾರಿ ಪ್ರಕ್ರಿಯೆ.
ಅಕ್ಟೋಬರ್ 7ಪರಿಷ್ಕೃತಗೊಂಡ ಅಂತಿಮ ಮತದಾರರ ಪಟ್ಟಿ ಪ್ರಕಟಣೆ.

ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕನ್ನು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯವಾಗಿದೆ. ಆದ್ದರಿಂದ, ಸಾರ್ವಜನಿಕರು ತಮ್ಮ ಮನೆಗೆ ಬರುವ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಸಹಕರಿಸಬೇಕೆಂದು ಚುನಾವಣಾ ಆಯೋಗ ಮನವಿ ಮಾಡಿದೆ.