ಡೈಲಿವಾರ್ತೆ: 30/ಜೂ./2026

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ – ಆರು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್

​ದಕ್ಷಿಣ ಕನ್ನಡ: ಕರಾವಳಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ ಅರಬ್ಬಿ ಸಮುದ್ರದಲ್ಲಿ ಭೀಕರ ಜಲ ಅವಘಡವೊಂದು ಸಂಭವಿಸಿದೆ. ಸಮುದ್ರದ ಮಧ್ಯೆ ದೈತ್ಯ ಅಲೆಗಳು ಹಾಗೂ ಬಿರುಗಾಳಿಯ ಅಬ್ಬರಕ್ಕೆ ಸಿಲುಕಿ ‘ಐಎಫ್‌ಬಿ ಮಂಜುಮಾತಾ’ ಎಂಬ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದ್ದು, ಅದರಲ್ಲಿದ್ದ ಆರು ಜನ ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ (ಕೋಸ್ಟ್ ಗಾರ್ಡ್) ಅತ್ಯಂತ ಸಾಹಸಿಕವಾಗಿ ರಕ್ಷಿಸಿದೆ.

​ಮಂಗಳೂರಿನ ಆಳ ಸಮುದ್ರಕ್ಕೆ ಆರು ಮಂದಿ ಮೀನುಗಾರರು ಮೀನುಗಾರಿಕೆಗಾಗಿ ತೆರಳಿದ್ದರು. ಸೋಮವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಸುರತ್ಕಲ್ ಕರಾವಳಿಯಿಂದ ಸುಮಾರು 33 ನಾಟಿಕಲ್ ಮೈಲುಗಳ ದೂರದಲ್ಲಿ ಸಂಚರಿಸುತ್ತಿದ್ದಾಗ ಹವಾಮಾನ ವೈಪರೀತ್ಯದಿಂದಾಗಿ ಬೋಟ್‌ಗೆ ತೀವ್ರ ಹಾನಿಯಾಗಿತ್ತು. ಭೀಕರ ಅಲೆಗಳ ಹೊಡೆತಕ್ಕೆ ಸಿಲುಕಿದ ಬೋಟ್‌ನೊಳಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಲಾರಂಭಿಸಿತು. ನೀರಿನ ಒತ್ತಡ ಹೆಚ್ಚಾಗಿ ಬೋಟ್ ಸಮುದ್ರದಲ್ಲಿ ಮುಳುಗಲು ಆರಂಭಿಸಿದಾಗ, ಆತಂಕಗೊಂಡ ಮೀನುಗಾರರು ತಕ್ಷಣವೇ ಕರಾವಳಿ ರಕ್ಷಣಾ ಪಡೆಗೆ ಅಪಾಯದ ಕರೆ ಕಳುಹಿಸಿದ್ದರು.

​ಮಾಹಿತಿ ಲಭ್ಯವಾಗುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಕಡಲ ಕಾವಲು ಪಡೆ, ತನ್ನ ಅತ್ಯಾಧುನಿಕ ಹಡಗಾದ ‘ಐಸಿಜಿಎಸ್ ಸಚೇತ್’ ಮೂಲಕ ಸ್ಥಳಕ್ಕೆ ಧಾವಿಸಿತು. ಆದರೆ, ಸಮುದ್ರದಲ್ಲಿ ಅಲೆಗಳ ಅಬ್ಬರ ರೌದ್ರರೂಪ ತಾಳಿದ್ದರಿಂದ ಮುಳುಗುತ್ತಿದ್ದ ದೋಣಿಯ ಹತ್ತಿರ ಹಡಗನ್ನು ಕೊಂಡೊಯ್ಯುವುದು ರಕ್ಷಣಾ ಸಿಬ್ಬಂದಿಗೆ ತೀವ್ರ ಸವಾಲಾಗಿ ಪರಿಣಮಿಸಿತು.

ಈ ಕಠಿಣ ಪರಿಸ್ಥಿತಿಯಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಅತ್ಯಾಧುನಿಕ ತಂತ್ರಜ್ಞಾನವಾದ ‘ರಿಮೋಟ್-ಆಪರೇಟೆಡ್ ಲೈಫ್‌ಬಾಯ್‌’ ಗಳನ್ನು (Remote-operated Lifebuoys) ಬಳಸಿದರು. ಮುಳುಗುತ್ತಿದ್ದ ಬೋಟ್‌ನಲ್ಲಿದ್ದ ಮೀನುಗಾರರ ಬಳಿಗೆ ಈ ರಿಮೋಟ್ ಚಾಲಿತ ಲೈಫ್‌ಬಾಯ್‌ಗಳನ್ನು ಯಶಸ್ವಿಯಾಗಿ ಕಳುಹಿಸಿಕೊಡುವ ಮೂಲಕ ಆರೂ ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ಹಡಗಿಗೆ ಎತ್ತಿಕೊಳ್ಳಲಾಯಿತು.

​ರಕ್ಷಿಸಲ್ಪಟ್ಟ ಆರು ಮಂದಿ ಮೀನುಗಾರರನ್ನು ಮಂಗಳೂರಿನ ನ್ಯೂ ಮಂಗಳೂರು ಬಂದರಿಗೆ (NMPT) ಸುರಕ್ಷಿತವಾಗಿ ಕರೆತರಲಾಗಿದೆ. ಅಲ್ಲಿ ಅವರಿಗೆ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ, ಆಹಾರ ಹಾಗೂ ಅಗತ್ಯ ನೆರವನ್ನು ಒದಗಿಸಲಾಗಿದೆ. ಸದ್ಯ ಎಲ್ಲಾ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಸ್ಟ್ ಗಾರ್ಡ್ ಸಿಬ್ಬಂದಿಯ ಈ ಸಮಯಪ್ರಜ್ಞೆ ಹಾಗೂ ಸಾಹಸಿಕ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.