ಡೈಲಿವಾರ್ತೆ: 30/ಜೂ./2026

ಚಲಿಸುವ ರೈಲಿನಿಂದ ವಯೋವೃದ್ಧ ಯಾತ್ರಿಕ ನಿಗೂಢ ನಾಪತ್ತೆ: ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲು

​ಬೈಂದೂರು: ಅಜ್ಮೀರ್ ದರ್ಗಾ ಪ್ರವಾಸ ಮುಗಿಸಿ ಕುಟುಂಬದೊಂದಿಗೆ ರೈಲಿನಲ್ಲಿ ಊರಿಗೆ ಮರಳುತ್ತಿದ್ದ ಕೇರಳದ ಕಾಸರಗೋಡು ನಿವಾಸಿ ಮುಸಾ ಯಾನೆ ಅಬುಸಾಲಿ (68) ಎಂಬ ವಯೋವೃದ್ಧರು ಚಲಿಸುವ ರೈಲಿನಿಂದಲೇ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಜೂನ್ 27ರಂದು ರಾತ್ರಿ 10:00 ಗಂಟೆಗೆ ಕಾರವಾರ ಸಮೀಪ ಮುರುಸಾದ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕುಟುಂಬದವರೊಂದಿಗೆ ಊಟ ಮಾಡಿ ಮಲಗಿದ್ದ ಮುಸಾ ಅವರು, ಮಧ್ಯರಾತ್ರಿ 1:00 ಗಂಟೆಗೆ ರೈಲು ಮಂಗಳೂರು ಸಮೀಪಿಸಿದಾಗ ಸೀಟಿನಲ್ಲಿ ಇರಲಿಲ್ಲ. ನಡೆದಾಡಲು ವಾಕಿಂಗ್ ಸ್ಟಿಕ್ ಬಳಸುತ್ತಿದ್ದ ಇವರು, ರೈಲು ನಿಂತಾಗ ಯಾವುದೋ ನಿಲ್ದಾಣದಲ್ಲಿ ಇಳಿದು ದಾರಿ ತಪ್ಪಿ ನಾಪತ್ತೆಯಾಗಿರಬಹುದು ಎಂದು ಶಂಕಿಸಲಾಗಿದೆ.
​ಬೈಂದೂರು ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಇವರು ಕಾಣೆಯಾಗಿರುವ ಸಾಧ್ಯತೆಯಿದ್ದು, ಮಗ ಮುಸ್ತಪಾ ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ‘ಗಂಡಸು ಕಾಣೆ’ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.