ಡೈಲಿವಾರ್ತೆ:01/ಜು/2026

ಮಂಗಳೂರಿನಲ್ಲಿ ಘೋರ ದುರಂತ: ಮನೆಯ ಮೇಲೆ ತಡೆಗೋಡೆ ಕುಸಿದು ಒಂದೇ ಕುಟುಂಬದ ಮೂವರು ಸಾವು, ಮೂವರು ಪಾರು

ಮಂಗಳೂರು, ಜು. 1: ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ ನಾಗುರಿ ಪ್ರದೇಶದಲ್ಲಿ ಸಂಭವಿಸಿದ ತಡೆಗೋಡೆ ಕುಸಿತದ ದುರಂತ ಮೂರು ಅಮೂಲ್ಯ ಜೀವಗಳನ್ನು ಬಲಿ ಪಡೆದಿದೆ.

ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗುರಿಯಲ್ಲಿ ಮನೆಯ ಮೇಲೆ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಹೆಂಚಿನ ಛಾವಣಿಯ ಮನೆ ಸಂಪೂರ್ಣ ಜಖಂಗೊಂಡಿದ್ದು, ಒಂದೇ ಕುಟುಂಬದ ಮಹಿಳೆ ಹಾಗೂ ಇಬ್ಬರು ಪುಟ್ಟ ಬಾಲಕಿಯರು ಮೃತಪಟ್ಟಿದ್ದಾರೆ.

ಘಟನೆ ಮಧ್ಯರಾತ್ರಿ ವೇಳೆ ಸಂಭವಿಸಿದ್ದು, ಆ ಸಮಯದಲ್ಲಿ ಮನೆಯಲ್ಲಿ ಒಟ್ಟು ಆರು ಮಂದಿ ಇದ್ದರು. ಭಾರೀ ಮಳೆಯ ಪರಿಣಾಮ ಪಕ್ಕದ ತಡೆಗೋಡೆ ದಿಢೀರ್ ಕುಸಿದು ಮನೆಯ ಮೇಲೆ ಬಿದ್ದ ಕಾರಣ, ಮನೆಯೊಳಗಿದ್ದವರಿಗೆ ಹೊರಬರಲು ಅವಕಾಶವೇ ದೊರೆಯಲಿಲ್ಲ. ಕೆಲವೇ ಕ್ಷಣಗಳಲ್ಲಿ ಮನೆ ಅವಶೇಷಗಳಡಿ ಸಿಲುಕಿಕೊಂಡಿದ್ದರು.

ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ ಸ್ಥಳೀಯ ರಕ್ಷಣಾ ಸಿಬ್ಬಂದಿ ತುರ್ತು ಕಾರ್ಯಾಚರಣೆ ಆರಂಭಿಸಿದರು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಅವಶೇಷಗಳಡಿ ಸಿಲುಕಿದ್ದ ಅಲ್ಕಾ (14), ಅನುಷಾ (11) ಹಾಗೂ ಬಾಲಕೃಷ್ಣ (48) ಅವರನ್ನು ಜೀವಂತವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ.
ಆದರೆ, ಅವಶೇಷಗಳಡಿ ತೀವ್ರವಾಗಿ ಸಿಲುಕಿಕೊಂಡಿದ್ದ ಶಾಂತಾ (46), ಅನಾಮಿಕ ಚೌರಾಸಿಯಾ (8) ಹಾಗೂ ಪರಿ (4) ಅವರನ್ನು ಹೊರತೆಗೆದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.

ಮೂಲತಃ ಬಿಹಾರ ರಾಜ್ಯದವರಾದ ಬಾಲಕೃಷ್ಣ ಅವರ ಕುಟುಂಬ ಕಳೆದ ಸುಮಾರು 20 ವರ್ಷಗಳಿಂದ ನಾಗುರಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು ಎಂದು ತಿಳಿದುಬಂದಿದೆ. ಜೀವನೋಪಾಯಕ್ಕಾಗಿ ಮಂಗಳೂರಿಗೆ ಬಂದಿದ್ದ ಕುಟುಂಬದ ಮೇಲೆ ಪ್ರಕೃತಿ ಈ ರೀತಿಯ ದುರ್ಘಟನೆ ಎಸಗಿರುವುದು ಮನಕಲಕುವಂತಾಗಿದೆ.
ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ರಕ್ಷಣಾ ಕಾರ್ಯಾಚರಣೆ, ಪರಿಹಾರ ಹಾಗೂ ಅಗತ್ಯ ಕಾನೂನು ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.