


ಡೈಲಿವಾರ್ತೆ:01/ಜು/2026


ಗೋವಾ ಗೆಸ್ಟ್‌ಹೌಸ್‌ನಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಆಪ್ತ ಸಹಾಯಕ ಮಲ್ಪೆ ಸಂದೀಪ್ ಸಾಲ್ಯಾನ್ ಸಂಶಯಾಸ್ಪದ ಸಾವು – ಕೊಲೆಯೋ, ಹೃದಯಾಘಾತವೋ ಎಂಬ ಶಂಕೆ!

ಉಡುಪಿ, ಜು. 1: ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಸಂದೀಪ್ ಸಾಲ್ಯಾನ್ (40) ಗೋವಾದ ಕಲ್ಲಂಗೂಟ್ ಬೀಚ್ ಸಮೀಪದ ಗೆಸ್ಟ್ ಹೌಸ್‌ನಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೂಲತಃ ಉಡುಪಿ ಜಿಲ್ಲೆಯ ಮಲ್ಪೆ ನಿವಾಸಿಯಾಗಿರುವ ಸಂದೀಪ್ ಸಾಲ್ಯಾನ್, ಹಲವು ವರ್ಷಗಳ ಹಿಂದೆ ಪ್ರಮೋದ್ ಮಧ್ವರಾಜ್ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಆ ಕೆಲಸವನ್ನು ತೊರೆದು, ಮಲ್ಪೆಯಲ್ಲಿ ಪ್ರವಾಸಿ ಬೋಟ್ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಮೂರು ದಿನಗಳ ಹಿಂದೆ ಪ್ರವಾಸದ ನಿಮಿತ್ತ ಗೋವಾಕ್ಕೆ ತೆರಳಿದ್ದ ಸಂದೀಪ್, ಕಲ್ಲಂಗೂಟ್ ಬೀಚ್ ಸಮೀಪದ ಗೆಸ್ಟ್ ಹೌಸ್‌ನಲ್ಲಿ ನಿನ್ನೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಸಾವಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪ್ರಾಥಮಿಕ ಹಂತದಲ್ಲಿ ಹೃದಯಾಘಾತದಿಂದ ಸಾವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದರೂ, ಕೆಲವು ಅನುಮಾನಾಸ್ಪದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದು ಸಹಜ ಸಾವೋ ಅಥವಾ ಕೊಲೆಯೋ ಎಂಬ ಪ್ರಶ್ನೆಗಳು ಮೂಡಿವೆ. ಈ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸಾವಿನ ನಿಜವಾದ ಕಾರಣ ಬೆಳಕಿಗೆ ಬರಲಿದ್ದು, ತನಿಖೆಯ ಮುಂದಿನ ಹಂತದಲ್ಲಿ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ. ಸಂದೀಪ್ ಸಾಲ್ಯಾನ್ ಅವರ ಅಕಾಲಿಕ ನಿಧನ ಕುಟುಂಬಸ್ಥರು, ಸ್ನೇಹಿತರು ಹಾಗೂ ಪರಿಚಯಸ್ಥರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.