


ಡೈಲಿವಾರ್ತೆ: 02/ಜು./2026


ಶಿವಮೊಗ್ಗ: ಗಾಂಜಾ ಮಾರಾಟ ವಿರೋಧಿಸಿದ್ದಕ್ಕೆ ಅಜ್ಜಿಯ ಕೊಲೆ – ಆರೋಪಿ ಮೊಮ್ಮಗನ ಕಾಲಿಗೆ ಪೊಲೀಸರ ಗುಂಡೇಟು!

ಶಿವಮೊಗ್ಗ: ಮಾದಕ ವಸ್ತು ಗಾಂಜಾ ಮಾರಾಟವನ್ನು ವಿರೋಧಿಸಿದ ಸ್ವಂತ ಅಜ್ಜಿಯನ್ನೇ ಭೀಕರವಾಗಿ ಹತ್ಯೆಗೈದಿದ್ದ ನರಹಂತಕ ಮೊಮ್ಮಗನಿಗೆ ಪೊಲೀಸರು ಶೂಟೌಟ್ ನಡೆಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಬಂಧನಕ್ಕೆ ತೆರಳಿದ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಿಶೋರ್ (28) ಕಾಲಿಗೆ ಪೊಲೀಸರು ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ.
ಆರೋಪಿ ಕಿಶೋರ್ ಕಾನೂನು ಬಾಹಿರವಾಗಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಎನ್ನಲಾಗಿದೆ. ಇದನ್ನು ಆತನ ಸ್ವಂತ ಅಜ್ಜಿ ತೀವ್ರವಾಗಿ ವಿರೋಧಿಸಿದ್ದರು. ಇದರಿಂದ ಆಕ್ರೋಶಗೊಂಡ ಕಿಶೋರ್, ಅಜ್ಜಿಯನ್ನೇ ಅಮಾನುಷವಾಗಿ ಕೊಲೆ ಮಾಡಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕಿಶೋರ್ ಶಿವಮೊಗ್ಗ ನಗರದ ಹೊರವಲಯದ ವಾಜಪೇಯಿ ಲೇಔಟ್‌ನಲ್ಲಿ ಅಡಗಿರುವ ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿತ್ತು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ, ಪೊಲೀಸ್ ಸಿಬ್ಬಂದಿ ಗಣೇಶ್ ಅವರ ಮೇಲೆ ದಿಢೀರ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಆರೋಪಿಯ ಉದ್ಧಟತನ ಹೆಚ್ಚಾದಾಗ ಪರಿಸ್ಥಿತಿಯನ್ನು ನಿಯಂತ್ರಿಸಲು ದೊಡ್ಡಪೇಟೆ ಇನ್‌ಸ್ಪೆಕ್ಟರ್ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ, ಅನಿವಾರ್ಯವಾಗಿ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ಕಿಶೋರ್‌ನನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇತ್ತ ಆರೋಪಿಯ ಹಲ್ಲೆಯಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಗಣೇಶ್ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ತುಂಗಾನಗರ ಪೊಲೀಸರು ಪ್ರಕರಣದ ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.