


ಡೈಲಿವಾರ್ತೆ: 02/ಜು./2026


ಗೋವಾ ರೆಸಾರ್ಟ್‌ನಲ್ಲಿ ಮಲ್ಪೆ ಮೂಲದ ವ್ಯಕ್ತಿ ನಿಗೂಢ ಸಾವು ಪ್ರಕರಣ: ತುಳು ಭಾಷೆ ಮಾತನಾಡುವ ನಿಗೂಢ ಮಹಿಳೆಗಾಗಿ ತೀವ್ರ ಶೋಧ!

ಪಣಜಿ (ಗೋವಾ): ಗೋವಾದ ಪ್ರಸಿದ್ಧ ಕ್ಯಾಲಂಗಟ್ ಬೀಚ್‌ನ ರೆಸಾರ್ಟ್ ಒಂದರಲ್ಲಿ ಮಲ್ಪೆ ಮೂಲದ ಸಂದೀಪ್ ಸಲ್ಯಾನ್ ಎಂಬುವವರ ಶವ ಪತ್ತೆಯಾಗಿರುವ ಪ್ರಕರಣ ಕರಾವಳಿಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ನಿಗೂಢ ಸಾವಿನ ಹಿಂದೆ ಸಂದೀಪ್ ಜೊತೆಯಲ್ಲಿದ್ದ ಮಹಿಳೆಯೊಬ್ಬಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು, ಗೋವಾ ಪೊಲೀಸರು ಆಕೆಗಾಗಿ ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದಾರೆ.
ಕ್ಯಾಸಿನೋದಲ್ಲಿ ಶುರುವಾದ ಪರಿಚಯ:

ಮಲ್ಪೆ ಮೂಲದ ಸಂದೀಪ್ ಸಲ್ಯಾನ್ ಅವರು ತಮ್ಮ ಸ್ನೇಹಿತರೊಂದಿಗೆ ಗೋವಾಕ್ಕೆ ಪ್ರವಾಸ ತೆರಳಿದ್ದರು. ಈ ವೇಳೆ ಅಲ್ಲಿನ ಕ್ಯಾಸಿನೋವೊಂದರಲ್ಲಿ ಮಹಿಳೆಯೊಬ್ಬಳ ಪರಿಚಯವಾಗಿದೆ. ಆಕೆ ಸಂದೀಪ್ ಜೊತೆ ತುಳು ಭಾಷೆಯಲ್ಲಿ ಮಾತನಾಡಿ, ತಾನು ಉಡುಪಿ ಜಿಲ್ಲೆಯ ಹಿರಿಯಡ್ಕ ನಿವಾಸಿ ಎಂದು ಪರಿಚಯಿಸಿಕೊಂಡಿದ್ದಾಳೆ. ಪರಿಚಯದ ಬಳಿಕ ಇಬ್ಬರೂ ಕ್ಯಾಲಂಗಟ್ ಬೀಚ್ ಬಳಿಯ ರೆಸಾರ್ಟ್‌ಗೆ ತೆರಳಿದ್ದಾರೆ. ಆದರೆ, ಅಲ್ಲಿಗೆ ಹೋದ ಮರುದಿನವೇ ಸಂದೀಪ್ ನಿಗೂಢವಾಗಿ ಸಾವನ್ನಪ್ಪಿರುವ ಆಘಾತಕಾರಿ ವಿಷಯ ಅವರ ಸ್ನೇಹಿತರಿಗೆ ತಿಳಿದುಬಂದಿದೆ.
ಚಿನ್ನಾಭರಣ, ನಗದು ಲೂಟಿ ಮಾಡಿ ಬೆಂಗಳೂರಿಗೆ ಪರಾರಿ?

ಸಂದೀಪ್ ಸಾವನ್ನಪ್ಪುತ್ತಿದ್ದಂತೆ ಆಕೆ ರೆಸಾರ್ಟ್‌ನಿಂದ ನಾಪತ್ತೆಯಾಗಿದ್ದಾಳೆ. ಅಷ್ಟೇ ಅಲ್ಲದೆ, ಮೃತರ ದೇಹದ ಮೇಲಿದ್ದ ಚಿನ್ನಾಭರಣ ಹಾಗೂ ಅವರ ಬಳಿಯಿದ್ದ ನಗದನ್ನು ದೋಚಿಕೊಂಡು ಆಕೆ ಪರಾರಿಯಾಗಿದ್ದಾಳೆ ಎಂದು ಶಂಕಿಸಲಾಗಿದೆ. ಸದ್ಯದ ತನಿಖೆಯ ಪ್ರಕಾರ, ಆಕೆ ಗೋವಾದಿಂದ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾಳೆ ಎಂಬ ಮಹತ್ವದ ಸುಳಿವು ಪೊಲೀಸರಿಗೆ ಸಿಕ್ಕಿದೆ.
ಸಾವು ಕೊಲೆಯೋ? ಹೃದಯಾಘಾತವೋ?

ಸಂದೀಪ್ ಸಾವು ಹೇಗೆ ಸಂಭವಿಸಿತು ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆಯಾಗಿದೆ. ಆಕೆಯೇ ವಿಷವಿಕ್ಕಿ ಅಥವಾ ಬೇರೆ ಯಾವುದೇ ರೀತಿಯಲ್ಲಿ ಕೊಲೆ ಮಾಡಿದ್ದಾಳೋ? ಅಥವಾ ಇದು ಹೃದಯಾಘಾತದಿಂದ ಸಂಭವಿಸಿದ ಸಾವೋ ಎಂಬುದು ನಿಗೂಢವಾಗಿದೆ. ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕವಷ್ಟೇ ಸಾವಿನ ಹಿಂದಿನ ನಿಜವಾದ ರಹಸ್ಯ ಹೊರಬರಬೇಕಿದೆ.

ಆಕ್ರೋಶ, ತನಿಖೆಗೆ ಹೆಚ್ಚಿದ ಒತ್ತಾಯ:
ಸಂದೀಪ್ ಸಾವಿನ ಸುದ್ದಿ ಹರಡುತ್ತಿದ್ದಂತೆ ಮಲ್ಪೆ ಹಾಗೂ ಕರಾವಳಿ ಭಾಗದ ಸಾರ್ವಜನಿಕರು ಮತ್ತು ಸ್ನೇಹಿತರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಸಂದೀಪ್ ಸಾವಿಗೆ ಕಾರಣಳಾದ ಆ ನಿಗೂಢ ಮಹಿಳೆಯನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಗ್ರಹ:
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು, ಪ್ರಕರಣದ ಕುರಿತು ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಗೋವಾ ಪೊಲೀಸರನ್ನು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಸದ್ಯ ಗೋವಾ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದು, ಬೆಂಗಳೂರಿಗೆ ಪರಾರಿಯಾಗಿರುವ ಮಹಿಳೆಯ ಪತ್ತೆಗಾಗಿ ವಿಶೇಷ ತಂಡವನ್ನು ನಿಯೋಜಿಸಿದ್ದಾರೆ.