ಡೈಲಿವಾರ್ತೆ: 02/ಜು./2026

ಗುಂಡ್ಯ ಬಳಿ ಭೀಕರ ಕಾರು ಅಪಘಾತ: ಸಾಲಿಗ್ರಾಮ ಮೂಲದ ವೃದ್ಧೆ ಸಾವು, ಇಬ್ಬರು ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯ

​ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ಬುಧವಾರ ಕಾರೊಂದಕ್ಕೆ ಅಪರಿಚಿತ ವಾಹನ ಡಿಕ್ಕಿಯಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವೃದ್ಧೆಯೊಬ್ಬರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

​ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಮೂಲದ ವಾಗ್ದೇವಿ (77) ಮೃತಪಟ್ಟ ದುರ್ದೈವಿಯಾಗಿದ್ದಾರೆ.

​ದೇವಸ್ಥಾನದಿಂದ ಹಿಂತಿರುಗುವಾಗ ಸಂಭವಿಸಿದ ದುರಂತ:

ಸಾಲಿಗ್ರಾಮ ಮೂಲದ ಒಂದೇ ಕುಟುಂಬದ ಸದಸ್ಯರು ಬಾಡಿಗೆ ಕಾರಿನಲ್ಲಿ ಜುಲೈ1 ರಂದು ಬುಧವಾರ ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮುಗಿಸಿಕೊಂಡು ತಮ್ಮ ಕಾರಿನಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಹಿಂತಿರುಗುತ್ತಿದ್ದರು. ಈ ವೇಳೆ ಗುಂಡ್ಯ ಸಮೀಪ ಬರುತ್ತಿದ್ದಂತೆ ಎದುರಿನಿಂದ ಬಂದ ಅಪರಿಚಿತ ವಾಹನವೊಂದು ಇವರ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಹೆದ್ದಾರಿ ಬದಿಗೆ ಎಸೆಯಲ್ಪಟ್ಟು ಸಂಪೂರ್ಣ ಜಖಂಗೊಂಡಿದೆ.

​ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಕಾರಿನೊಳಗೆ ಸಿಲುಕಿಕೊಂಡಿದ್ದರು. ತಕ್ಷಣವೇ ಸ್ಥಳೀಯರು ಧಾವಿಸಿ ಬಂದು ಗಾಯಾಳುಗಳನ್ನು ಕಾರಿನಿಂದ ಹೊರತೆಗೆಯಲು ನೆರವಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು.
​ಆದರೆ, ಗಾಯಗಳ ತೀವ್ರತೆ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ವೃದ್ಧೆ ವಾಗ್ದೇವಿಯವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

​ಅಪಘಾತದಲ್ಲಿ ಕಾರಿನಲ್ಲಿದ್ದ ಇತರ ಪ್ರಯಾಣಿಕರಾದ ಸಂಜೀವಿನಿ, ಸತೀಶ್, ಮಕ್ಕಳಾದ ವರಲಕ್ಷ್ಮಿ ಮತ್ತು ಕಾರ್ತೇಶ್ ಹಾಗೂ ಕಾರು ಚಾಲಕ ಗುರುರಾಜ್ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು, ಸದ್ಯ ಇವರೆಲ್ಲರನ್ನೂ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

​ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.