ಡೈಲಿವಾರ್ತೆ: 02/ಜು./2026

ಡೀಸೆಲ್ ತುಂಬಿಸಿ ಹಣ ನೀಡದೆ ಪರಾರಿಯಾಗಿದ್ದ ಮೂವರು ಆರೋಪಿಗಳು ಬೆಂಗಳೂರಿನಲ್ಲಿ ಶಿರ್ವ ಪೊಲೀಸರ ಬಲೆಗೆ

​ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಕುರ್ಕಾಲು ಗ್ರಾಮದ ಸುಭಾಸ್‌ ನಗರದಲ್ಲಿರುವ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ವಂಚಿಸಿ ಪರಾರಿಯಾಗಿದ್ದ ಮೂವರು ಅಂತರ್ಜಿಲ್ಲೆ ಆರೋಪಿಗಳನ್ನು ಶಿರ್ವ ಪೊಲೀಸರು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

​ಪ್ರಕರಣದ ಹಿನ್ನೆಲೆ:
​ಜೂನ್ 27ರಂದು ರಾತ್ರಿ ಸುಮಾರು 9:10ರ ವೇಳೆಗೆ ಸುಭಾಸ್ ನಗರದ ಪೆಟ್ರೋಲ್ ಬಂಕ್‌ಗೆ ಫೋರ್ಡ್ ಇಕೋಸ್ಪೋರ್ಟ್ (KA14-MB-8452) ಕಾರಿನಲ್ಲಿ ಬಂದಿದ್ದ ಮೂವರು ಆರೋಪಿಗಳು, ತಮ್ಮ ವಾಹನಕ್ಕೆ ₹4,711.09 ಮೌಲ್ಯದ ಡೀಸೆಲ್ ತುಂಬಿಸಿಕೊಂಡಿದ್ದರು. ಬಳಿಕ ಬಿಲ್ ಪಾವತಿಸಲು QR ಕೋಡ್ ಸ್ಕ್ಯಾನ್ ಮಾಡುವಂತೆ ಅಲ್ಲಿನ ಸಿಬ್ಬಂದಿಗೆ ತಿಳಿಸಿ, ಹಣ ಪಾವತಿಸುವಂತೆ ನಟಿಸಿ ನಂಬಿಕೆ ದ್ರೋಹ ಎಸಗಿದ್ದಾರೆ. ತದನಂತರ ಸಿಬ್ಬಂದಿಯ ಕಣ್ಣು ತಪ್ಪಿಸಿ ಹಣ ನೀಡದೆಯೇ ಕಾರಿನೊಂದಿಗೆ ಸ್ಥಳದಿಂದ ಪಲಾಯನ ಮಾಡಿದ್ದರು.

​ಈ ವಂಚನೆಗೆ ಸಂಬಂಧಿಸಿದಂತೆ ಬಂಕ್ ಸಿಬ್ಬಂದಿ ನೀಡಿದ ದೂರಿನನ್ವಯ ಶಿರ್ವ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS 2023) ಕಲಂ 316(2) ಮತ್ತು 318(4) ರ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿತ್ತು.

​ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಕಾರ್ಕಳ ಪೊಲೀಸ್ ಉಪಾಧೀಕ್ಷಕ ವಿಜಯ ಪ್ರಸಾದ್ ಹಾಗೂ ಕಾಪು ವೃತ್ತ ನಿರೀಕ್ಷಕ ಅಝಮತ್ ಅಲಿ ಅವರ ಸೂಕ್ತ ಮಾರ್ಗದರ್ಶನದಲ್ಲಿ, ಶಿರ್ವ ಠಾಣೆಯ ಉಪನಿರೀಕ್ಷಕ ಮಂಜುನಾಥ ಮರಬದ ನೇತೃತ್ವದ ವಿಶೇಷ ಪೊಲೀಸ್ ತಂಡವು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ, ತಲೆಮರೆಸಿಕೊಂಡಿದ್ದ ಮೂವರೂ ಆರೋಪಿಗಳನ್ನು ಪತ್ತೆಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ.

​ಬಂಧಿತ ಆರೋಪಿಗಳಾದ ಮಹಮ್ಮದ್ ರಿಯಾಜ್ (26) ಕೋಟೆಕಾ‌ರ್, ಕಾಪು ತಾಲೂಕು ಮಹಮ್ಮದ್ ಅಫ್ರಾಜ್ (23), ಭೂತಬೆಟ್ಟು, ಶಿರ್ವ ಆಶಿಲ್ (21) ಅಂಬಾಗಿಲು ಉಡುಪಿ ಇವರನ್ನು ಸದ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಇವರು ರಾಜ್ಯದ ಇತರೆಡೆಗಳಲ್ಲೂ ಇದೇ ಮಾದರಿಯ ಪೆಟ್ರೋಲ್ ಬಂಕ್ ವಂಚನೆ ಹಾಗೂ ಇತರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಶಿರ್ವ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.