ಡೈಲಿವಾರ್ತೆ: 03/ಜು./2026

ಸಾಲಿಗ್ರಾಮ ಮೇಳಕ್ಕೆ ಮರಳಿ ಲಗ್ಗೆ ಇಡಲಿದ್ದಾರೆ ಚಂಡೆಯ ಗಂಡುಗಲಿ ‘ಕೋಟ ಶಿವಾನಂದ’ : ಜುಲೈ 4 ರಂದು ಅಭಿಮಾನಿ ಬಳಗ ಮತ್ತು ಕಲಾ ವೇದಿಕೆ ಸಾಲಿಗ್ರಾಮ ವತಿಯಿಂದ ವಿಶೇಷ ಸನ್ಮಾನ ಹಾಗೂ “ದಕ್ಷಯಜ್ಞ” ಯಕ್ಷಗಾನ ಪ್ರದರ್ಶನ

​ಕೋಟ: ಯಕ್ಷಗಾನ ರಂಗಸ್ಥಳದಲ್ಲಿ ಪ್ರಪ್ರಥಮ ಬಾರಿಗೆ ಏಳು ಚಂಡೆಗಳನ್ನು ಏಕಕಾಲದಲ್ಲಿ ಬಾರಿಸಿ ಇತಿಹಾಸ ಸೃಷ್ಟಿಸಿದ ಹೆಗ್ಗಳಿಕೆ ಹೊಂದಿರುವ, ಚಂಡೆಯ ಗಂಡುಗಲಿ ಎಂದೇ ಪ್ರಸಿದ್ಧರಾದ ಕೋಟ ಶಿವಾನಂದರು ಪ್ರಸ್ತುತ ಮುಂದಿನ ತಿರುಗಾಟಕ್ಕೆ ಸಾಲಿಗ್ರಾಮ ಮೇಳದಲ್ಲಿ ಜೊತೆಯಾಗಲಿದ್ದಾರೆ.
​ಯಕ್ಷಗಾನ ಕ್ಷೇತ್ರದ ದಂತಕಥೆ ಕಾಳಿಂಗ ನಾವುಡರ ಪ್ರಿಯ ಶಿಷ್ಯರಾದ ಕೋಟ ಶಿವಾನಂದರು ಸುಮಾರು ನಾಲ್ಕು ದಶಕಗಳ ಸುದೀರ್ಘ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ ನಿಷ್ಠಾವಂತ ಕಲಾವಿದರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದಾಗಿ ವಿಶ್ರಾಂತಿ ಪಡೆಯುತ್ತಿದ್ದ ಅವರು, ಇದೀಗ ಸಾಲಿಗ್ರಾಮ ಮೇಳಕ್ಕೆ ಮರಳಿ ಬರುತ್ತಿರುವುದು ಅಭಿಮಾನಿಗಳಲ್ಲಿ ಅಪಾರ ಸಂತಸ ಮೂಡಿಸಿದೆ. ಈ ನಿಟ್ಟಿನಲ್ಲಿ ಕೋಟ ಶಿವಾನಂದರ ಅಭಿಮಾನಿ ಬಳಗ ಮತ್ತು ಕಲಾ ವೇದಿಕೆ ಸಾಲಿಗ್ರಾಮ ವತಿಯಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಜುಲೈ 4 ರಂದು ಶನಿವಾರ ಸಂಜೆ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಯಕ್ಷಗಾನ ಪ್ರದರ್ಶನದ ಮೂಲಕ ಅವರನ್ನು ಮರಳಿ ಯಕ್ಷರಂಗಕ್ಕೆ ಸ್ವಾಗತಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

​ಕಾರ್ಯಕ್ರಮದ ಉದ್ಘಾಟನೆಯನ್ನು ಗೀತಾನಂದ ಫೌಂಡೇಶನ್‌ನ ಪ್ರವರ್ತಕರಾದ ಆನಂದ ಸಿ ಕುಂದರ್ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಚಂದ್ರಶೇಖರ್ ಉಪಾಧ್ಯಾಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ತಾರಾನಾಥ್ ಹೊಳ್ಳ, ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ್ ಜಿ., ಪ್ರಗತಿಪರ ಕೃಷಿಕರಾದ ರವೀಂದ್ರ ಐತಾಳ್, ಕೋಟ ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಶೇವಾಧಿ, ಕೋಟ ಸಿಎ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಹಾಗೂ ಸಿನಿಮಾ ಮತ್ತು ರಂಗಭೂಮಿ ಕಲಾವಿದೆ ಶ್ರೀಮತಿ ಪ್ರತಿಮಾ ನಾಯಕ್ ಉಪಸ್ಥಿತರಿರಲಿದ್ದಾರೆ.

​ಸಂಜೆ 7.00ಕ್ಕೆ ಯಕ್ಷಗಾನ: ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ, ಶ್ರೀ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಇವರ ಪ್ರೋತ್ಸಾಹದೊಂದಿಗೆ ‘ದಕ್ಷ ಯಜ್ಞ’ ಯಕ್ಷಗಾನ ಪ್ರದರ್ಶನ ಜರುಗಲಿದೆ.

​ವಿಶೇಷ ಆಕರ್ಷಣೆ: ಹಿಮ್ಮೇಳದಲ್ಲಿ ಪ್ರಸಾದ್ ಮೊಗೇಬೆಟ್ಟು, ಲಂಬೋದರ ಹೆಗಡೆ,ಮದ್ದಳೆಯಲ್ಲಿ ಶ್ರೀಯುತ ರಾಘವೇಂದ್ರ ಹೆಗಡೆ ಯಲ್ಲಾಪುರ ಮತ್ತು ಚಂಡೆಯಲ್ಲಿ ಶ್ರೀಯುತ ರಾಮಕೃಷ್ಣ ಮಂದಾರ್ತಿ ಸಹಕರಿಸಲಿದ್ದಾರೆ.

ಮುಮ್ಮೇಳದಲ್ಲಿ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಯಕ್ಷ ಕನ್ನಿಕೆ ಶಶಿಕಾಂತ್ ಶೆಟ್ಟಿ ಕಾರ್ಕಳ, ಸುಜೇಂದ್ರ ಹಂದೆ ಕೋಟ ಮುಂತಾದ ಪ್ರಮುಖ ಕಲಾವಿದರು ಭಾಗವಹಿಸಲಿದ್ದಾರೆ.

ವಿಶೇಷವಾಗಿ ಸಿನಿಮಾ ಹಾಗೂ ರಂಗ ನಟ ರಘು ಪಾಂಡೇಶ್ವರ್ ಮತ್ತು ಕೋಟ ಶಿವಾನಂದ ಅವರ ಜೋಡಿ ಹಾಸ್ಯ ಪ್ರದರ್ಶನದ ಗೊಳ್ಳಲಿದೆ.
ಮುಖ್ಯ ಆಕರ್ಷಣೆಯಾಗಿ ರಮೇಶ್ ಮೆಂಡನ್ ಸಾಲಿಗ್ರಾಮ ಇವರ ಅಬ್ಬರದ ವೀರಭದ್ರನ ಪಾತ್ರದಲ್ಲಿ ಮಿಂಚಲಿದ್ದಾರೆ.

​ಕೋಟ ಶಿವಾನಂದರನ್ನು ಮರಳಿ ಯಕ್ಷರಂಗಕ್ಕೆ ಬರಮಾಡಿಕೊಳ್ಳುವ ಈ ಕಲಾ ಸಂಭ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಅಭಿಮಾನಿ ಬಳಗ ಪ್ರಕಟಣೆಯಲ್ಲಿ ವಿನಂತಿಸಿದೆ.