ಡೈಲಿವಾರ್ತೆ: 07/ಜು./2026

ಸುಜ್ಞಾನ ಕಾಲೇಜಿನಲ್ಲಿ ‘ವಾಲ್ಬೆಲ್ಲ’ ಸಾಂಸ್ಕೃತಿಕ ಹಬ್ಬದ ವೈಭವದ ಸಮಾರೋಪ: ದುಶ್ಚಟಗಳಿಂದ ದೂರವಿದ್ದು, ಸ್ವಂತ ಭವಿಷ್ಯ ರೂಪಿಸಿಕೊಳ್ಳಿ- ಜಯಪ್ರಕಾಶ್ ಹೆಗ್ಡೆ ಕರೆ

ಕುಂದಾಪುರ: ವಿದ್ಯಾರ್ಥಿ ದೆಸೆಯಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಮಾದಕ ವ್ಯಸನ ಹಾಗೂ ಆನ್‌ಲೈನ್ ಬೆಟ್ಟಿಂಗ್‌ನಂತಹ ದುಶ್ಚಟಗಳಿಂದ ಸಂಪೂರ್ಣ ದೂರವಿರಬೇಕು ಎಂದು ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಪ್ರಮುಖರು ಹಾಗೂ ಮಾಜಿ ಸಚಿವರಾದ ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ ಅವರು ವಿದ್ಯಾರ್ಥಿಗಳಿಗೆ ಮಾರ್ಮಿಕ ಕರೆ ನೀಡಿದರು.

​ಅವರು ಯಡಾಡಿ-ಮತ್ಯಾಡಿಯ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಜಂಟಿ ಆಶ್ರಯದಲ್ಲಿ, ಇಲ್ಲಿನ ವಿದ್ಯಾರಣ್ಯ ಶಾಲಾ ಆವರಣದಲ್ಲಿ ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆಗಳ ಮಹಾಸಂಗಮ ‘ವಾಲ್ಬೆಲ್ಲ’ ಕಾರ್ಯಕ್ರಮದ ಸಮಾರೋಪ ಹಾಗೂ ಭವ್ಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
​ಬೆಟ್ಟಿಂಗ್ ದಂಧೆಯ ಹಿಂದಿರುವ ಕಹಿ ಸತ್ಯವನ್ನು ಬಿಚ್ಚಿಟ್ಟ ಹೆಗ್ಡೆ ಅವರು, ಬೆಟ್ಟಿಂಗ್ ನಡೆಸುವ ಆಯೋಜಕರಿಗೆ ಇದರಿಂದ ಎಂದಿಗೂ ನಷ್ಟವಾಗುವುದಿಲ್ಲ. ಆದರೆ ಇದರಲ್ಲಿ ಪಾಲ್ಗೊಳ್ಳುವ ಅಮಾಯಕ ವಿದ್ಯಾರ್ಥಿಗಳೇ ಸರ್ವಸ್ವವನ್ನೂ ಕಳೆದುಕೊಂಡು ನಷ್ಟ ಅನುಭವಿಸುತ್ತಾರೆ ಎಂಬ ಸತ್ಯವನ್ನು ಅರಿಯಬೇಕು. ಇದರೊಂದಿಗೆ ಸಂಸ್ಕಾರವನ್ನೂ ಕಲಿಯಬೇಕು. ತಂದೆ-ತಾಯಿಯನ್ನು ಗೌರವಿಸಬೇಕೇ ಹೊರತು, ಭವಿಷ್ಯದಲ್ಲಿ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವಂತಹ ಕಠೋರ ಮನೋಭಾವವನ್ನು ಎಂದಿಗೂ ಬೆಳೆಸಿಕೊಳ್ಳಬಾರದು ಎಂದು ಗಂಭೀರವಾಗಿ ನುಡಿದರು.

​ಕುಂದಾಪುರ ನನ್ನ ವೃತ್ತಿ ಹಾಗೂ ವೈಯಕ್ತಿಕ ಜೀವನದ ಕೇಂದ್ರಬಿಂದು: ಎಸ್ಪಿ ಹರಿರಾಮ್ ಶಂಕರ್

​ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬಹುಮಾನ ವಿತರಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀ ಹರಿರಾಮ್ ಶಂಕರ್ (IPS) ಅವರು ಮಾತನಾಡಿ ನಾನು ಜನಿಸಿದ್ದು ಕೇರಳದಲ್ಲಾದರೂ, ನನ್ನ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದ ಪ್ರತಿಯೊಂದು ಮಹತ್ತರ ತಿರುವುಗಳಿಗೂ ಕುಂದಾಪುರವೇ ಕೇಂದ್ರಬಿಂದುವಾಗಿದೆ. ಇಲ್ಲಿನ ಜನ ನನ್ನನ್ನು ತಮ್ಮವರನ್ನಾಗಿ ಸ್ವೀಕರಿಸಿದ್ದಾರೆ, ಹಾಗಾಗಿ ನಾನು ಹೆಮ್ಮೆಯಿಂದ ನನ್ನನ್ನು ಕುಂದಾಪುರದವನು ಎಂದು ಕರೆದುಕೊಳ್ಳುತ್ತೇನೆ ಎಂದರು.

ಸಿವಿಲ್ ಸರ್ವಿಸ್ ಪರೀಕ್ಷೆಯ ಆರಂಭದ ಎರಡು ಯತ್ನಗಳಲ್ಲಿ ಅಪಜಯ ಎದುರಾದಾಗ, ಸ್ನೇಹಿತನ ಸಲಹೆಯಂತೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದು ಪ್ರಾರ್ಥಿಸಿದ್ದೆ. ಆ ವರ್ಷವೇ ನನಗೆ IA&AS ಲಭಿಸಿತು, ತದನಂತರ ಐಪಿಎಸ್ ಅಧಿಕಾರಿಯಾದೆ. ನನ್ನ ಮೊದಲ ಪೋಸ್ಟಿಂಗ್ ಸಿಕ್ಕಿದ್ದೂ ಕುಂದಾಪುರದ ಡಿವೈಎಸ್‌ಪಿ ಆಗಿ. ಕೋವಿಡ್ ಕಠಿಣ ದಿನಗಳಲ್ಲಿ ಇಲ್ಲಿನ ಜನರ ಹೃದಯವಂತಿಕೆಯನ್ನು ಕಣ್ಣಾರೆ ಕಂಡಿದ್ದೇನೆ. ನನ್ನ ಮದುವೆಯಾಗಿದ್ದೂ ಇದೇ ಕೊಲ್ಲೂರು ಕ್ಷೇತ್ರದಲ್ಲಿ ಎನ್ನುವುದು ನನ್ನ ಭಾಗ್ಯ ಎಂದು ನೆನಪಿಸಿಕೊಂಡರು.
​ಭಾಷಾ ಪ್ರೇಮ: ಕನ್ನಡ ಕಲಿತು ಎಸ್ಪಿ ಬಡ್ತಿ ಪರೀಕ್ಷೆ ಪಾಸ್ ಮಾಡಲು ನನಗೆ ನೆರವಾಗಿದ್ದು ಕುಂದಾಪುರದ ಆರ್.ಎನ್. ಶೆಟ್ಟಿ ಕಾಲೇಜಿನ ಉಪನ್ಯಾಸಕ ಕೃಷ್ಣಮೂರ್ತಿ ಅವರು. ಪ್ರತಿಯೊಂದು ಪ್ರಾದೇಶಿಕ ಉಪಭಾಷೆಗೂ ಸಾಂಸ್ಕೃತಿಕ ಮೌಲ್ಯವಿದ್ದು, ಇಂದಿನ ಯುವ ಪೀಳಿಗೆಯಲ್ಲಿ ಭಾಷಾ ಪ್ರೇಮ ಮೂಡಿಸುತ್ತಿರುವ ‘ವಾಲ್ಬೆಲ್ಲ’ ದಂತಹ ಕಾರ್ಯಕ್ರಮಗಳು ಪ್ರತಿವರ್ಷವೂ ನಡೆಯಬೇಕು ಎಂದು ಆಶಿಸಿದರು.

​ನಿಮ್ಮ ಆಸಕ್ತಿಗೆ ತಕ್ಕ ವೃತ್ತಿ ಆಯ್ಕೆ ಮಾಡಿ: ಎಸಿ ರಶ್ಮಿ ಎಸ್. ಆರ್. ಕಿವಿಮಾತು

​ಮತ್ತೊಬ್ಬ ಮುಖ್ಯ ಅತಿಥಿ, ಕುಂದಾಪುರ ಉಪ ವಿಭಾಗಾಧಿಕಾರಿ (AC) ಶ್ರೀಮತಿ ರಶ್ಮಿ ಎಸ್. ಆರ್. (KAS) ಅವರು ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಾವುದೇ ವೃತ್ತಿಯನ್ನು (Profession) ಆಯ್ಕೆ ಮಾಡಿಕೊಳ್ಳುವ ಮುನ್ನ ತಮ್ಮ ಆಸಕ್ತಿ ಮತ್ತು ಪ್ರತಿಭೆ ಎಲ್ಲಿದೆ ಎಂಬುದನ್ನು ಅರಿತುಕೊಳ್ಳಬೇಕು. ನಿದ್ದೆಯಲ್ಲಿ ಕಾಣುವ ಕನಸುಗಳಿಗಿಂತ, ನಮ್ಮನ್ನು ನಿದ್ದೆ ಮಾಡದಂತೆ ಮಾಡುವ ಕನಸುಗಳು ನನಸಾಗಬೇಕು ಎಂದರು.
​ಮಂಗಳೂರಿನಿಂದ ಬ್ರಹ್ಮಾವರ ಕ್ರಾಸ್ ಆಗುತ್ತಿದ್ದಂತೆಯೇ ಬದಲಾಗುವ ಕುಂದಾಪ್ರ ಕನ್ನಡದ ಸೊಗಡನ್ನು ಶ್ಲಾಘಿಸಿದ ಅವರು “ವಾಲ್ಬೆಲ್ಲ” ಎಷ್ಟು ತಿಂದರೂ ಕಾಯಿಲೆ ಬರುವುದಿಲ್ಲ, ಸಕ್ಕರೆ ತಿಂದರೆ ರೋಗ ಬರುತ್ತದೆ. ಈ ವಾಲ್ಬೆಲ್ಲದ ಸವಿಯಂತೆ ಪ್ರತಿಯೊಬ್ಬ ವಿದ್ಯಾರ್ಥಿಯ ಹಾಗೂ ಕರ್ನಾಟಕದ ಸಮಸ್ತ ಜನತೆಯ ಜೀವನವೂ ಸುಖಕರವಾಗಿರಲಿ ಎಂದು ಹಾರೈಸಿದರು.

​ಮೊಬೈಲ್ ವ್ಯಾಮೋಹ ಬಿಟ್ಟು ನೆಲಮೂಲದ ಸಂಸ್ಕೃತಿ ಗೌರವಿಸಿ: ಮನು ಹಂದಾಡಿ

​ಪ್ರಖ್ಯಾತ ಹಾಸ್ಯ ಕಲಾವಿದ ಹಾಗೂ ಚಿಂತಕ ಶ್ರೀ ಮನು ಹಂದಾಡಿ ಅವರು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಯುವ ಪೀಳಿಗೆಯನ್ನು ತರಾಟೆಗೆ ತಗೆದುಕೊಂಡು ಇಂದಿನ ಯುವ ಪೀಳಿಗೆ ಆಧುನೀಕರಣದ ಹೆಸರಿನಲ್ಲಿ ಮೊಬೈಲ್ ಫೋನ್‌ಗಳಿಗೆ ದಾಸರಾಗಿ ನಮ್ಮ ನೆಲದ ಭಾಷೆ, ಸಂಸ್ಕೃತಿ ಮತ್ತು ಕಲೆಗಳನ್ನು ಮರೆಯುತ್ತಿರುವುದು ವಿಷಾದನೀಯ. ಹಳೆಯ ಕಾಲದ ಸಾಂಪ್ರದಾಯಿಕ ವಸ್ತುಗಳ ಜಾಗದಲ್ಲಿ ಇಂದು ಕೇವಲ ‘ಮೊಬೈಲ್’ ಮಾತ್ರ ಉಳಿದುಕೊಂಡಿದೆ. ಹಣಿ ಮರದಿಂದ ಇಳಿಸುವ ಸಿಹಿ ಹನಿಯನ್ನು ಕಾಯಿಸಿ, ತೆಂಗಿನ ಓಲೆಯ ಪರಿಧಿಯಲ್ಲಿಟ್ಟು ಗಟ್ಟಿ ಮಾಡುವ ವಿಶಿಷ್ಟ ಬೆಲ್ಲವೇ ವಾಲ್ಬೆಲ್ಲ. ಈ ನೆಲಮೂಲದ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಮಾಜಮುಖಿ ಸೇವೆಗಾಗಿ ಗಿಳಿಯಾರು ಕುಶಲ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷರಾದ ಉದಯ ಹೆಗ್ಡೆ ಅವರನ್ನು ಸಂಸ್ಥೆಯ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಶ್ರೀಮತಿ ಸುಮಾ ಸಂಗ್ರಾಮ್ ಶೆಟ್ಟಿ ಅವರು ಸನ್ಮಾನ ಪತ್ರ ವಾಚಿಸಿದರು.
​ವೇದಿಕೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಮಾರುತಿ ಎಲ್, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಂಯೋಜಕ ನಾಗಪ್ಪ ಗೌಡ, ಪೀಠದ ಸದಸ್ಯರುಗಳಾದ ಉದಯ ಶೆಟ್ಟಿ ಪಡುಕೆರೆ, ಡಾ. ರೇಖಾ ಬನ್ನಾಡಿ, ಪಂಜು ಗಂಗೊಳ್ಳಿ, ಸುಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ, ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಪದಾಧಿಕಾರಿಗಳಾದ ಪ್ರದೀಪ್ ಕೆ. ಹಾಗೂ ಅನಿತಾ ಕುಮಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕೋಶಾಧಿಕಾರಿ ಭರತ್‌ ಶೆಟ್ಟಿ ಸ್ವಾಗತಿಸಿದರು. ಪ್ರಣೂತ್ ಆರ್. ಗಾಣಿಗ ಬಹುಮಾನ ವಿಜೇತರ ಪಟ್ಟಿಯನ್ನು ಪ್ರಕಟಿಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರದೀಪ್ ಶೆಟ್ಟಿ ವಂದನಾರ್ಪಣೆ ಮಾಡಿದರು. ಇಡೀ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ ಕೆ.ಸಿ. ರಾಜೇಶ್ ಅತ್ಯಂತ ಯಶಸ್ವಿಯಾಗಿ ನಿರೂಪಿಸಿದರು.