ಡೈಲಿವಾರ್ತೆ: 07/ಜು./2026

ವಯನಾಡಿನಲ್ಲಿ ಮತ್ತೆ ಭೂಕುಸಿತದ ಭೀಕರ ದುರಂತ; ಇಬ್ಬರು ಜೀವಂತ ಸಮಾಧಿ, 20ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳಡಿ!

ತಿರುವನಂತಪುರಂ: ಎರಡು ವರ್ಷಗಳ ಹಿಂದೆ ಕೇರಳದ ವಯನಾಡಿನ ಚೂರಲ್ಮಲದಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದ ಕರಾಳ ನೆನಪು ಇನ್ನೂ ಮಾಸುವ ಮುನ್ನವೇ, ಜಿಲ್ಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ವಯನಾಡಿನ ಮೆಪ್ಪಾಡಿಯ ಸುರಂಗ ನಿರ್ಮಾಣ ಪ್ರದೇಶದ ಮೀನಾಕ್ಷಿ ಸೇತುವೆ ಸಮೀಪ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ ಇಬ್ಬರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ.

ದುರಂತದಲ್ಲಿ ಸುಮಾರು 20 ಮಂದಿ ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದು, 30 ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕ ಎದುರಾಗಿದೆ. ಸ್ಥಳೀಯರು ಗಾಯಗೊಂಡಿದ್ದ ಆರು ಮಂದಿಯನ್ನು ರಕ್ಷಿಸಿ ಮೆಪ್ಪಾಡಿಯ ಡಾ. ಮೂಪೆನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ನಿರಂತರ ಧಾರಾಕಾರ ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದ್ದು, ಮಣ್ಣು ಕುಸಿದ ಪ್ರದೇಶದಲ್ಲಿ ಹಲವು ವಾಹನಗಳೂ ಹೂತುಹೋಗಿವೆ. ಕಳೆದ 24 ಗಂಟೆಗಳಲ್ಲಿ ವಯನಾಡು ಪ್ರದೇಶದಲ್ಲಿ 26 ಸೆಂ.ಮೀ. ಮಳೆಯಾಗಿರುವ ಹಿನ್ನೆಲೆಯಲ್ಲಿ ಚೂರಲ್ಮಲ ಭಾಗಕ್ಕೆ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ನಿನ್ನೆಯಿಂದಲೇ ಸುರಂಗ ಕಾಮಗಾರಿಯನ್ನೂ ಸ್ಥಗಿತಗೊಳಿಸಲಾಗಿತ್ತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಂಡಿದ್ದು, ಮುಖ್ಯಮಂತ್ರಿ ವಿ.ಡಿ. ಸತೀಶನ್ ಇಬ್ಬರು ಸಚಿವರನ್ನು ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ.

ಎರಡು ವರ್ಷಗಳ ಹಿಂದೆ ನೂರಾರು ಜೀವಗಳನ್ನು ಬಲಿ ಪಡೆದಿದ್ದ ವಯನಾಡಿನ ಭೂಕುಸಿತದ ದುರಂತದ ಬಳಿಕ ಮತ್ತೊಮ್ಮೆ ಇದೇ ಪ್ರದೇಶದಲ್ಲಿ ಸಂಭವಿಸಿರುವ ಈ ಅವಘಡ ಕೇರಳವನ್ನು ಮತ್ತೆ ಆತಂಕಕ್ಕೆ ದೂಡಿದ್ದು, ನಿರಂತರ ಮಳೆಯ ನಡುವೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.