


ಡೈಲಿವಾರ್ತೆ: 13/ಜು./2026


ಬಿಡದಿ ಟೌನ್‌ಶಿಪ್‌ಗೆ ರೈತರ ತೀವ್ರ ಪ್ರತಿರೋಧ: ಸರ್ವೇಗೆ ಬಂದ ಅಧಿಕಾರಿಗಳಿಗೆ ಮಹಿಳೆಯರಿಂದ ಪೊರಕೆ ಏಟು!

ರಾಮನಗರ: ಬಿಡದಿ ಟೌನ್‌ಶಿಪ್ ವ್ಯಾಪ್ತಿಯಲ್ಲಿ ಜಮೀನು ಸರ್ವೇ ಮಾಡಲು ಬಂದ ಅಧಿಕಾರಿಗಳಿಗೆ ಸ್ಥಳೀಯ ರೈತರು ಮತ್ತು ಮಹಿಳೆಯರು ಸೋಮವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಸೋಮವಾರ ಮಧ್ಯಾಹ್ನ ಸರ್ವೇ ಕಾರ್ಯಕ್ಕಾಗಿ ಅಧಿಕಾರಿಗಳು ಆಗಮಿಸುತ್ತಿದ್ದಂತೆ ಆಕ್ರೋಶಗೊಂಡ ರೈತರು ಹಾಗೂ ಮಹಿಳೆಯರು ಅವರನ್ನು ಸುತ್ತುವರಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲ ಮಹಿಳೆಯರು ಪೊರಕೆ ಹಿಡಿದು ಅಧಿಕಾರಿಗಳಿಗೆ ಸಂಕೇತಾತ್ಮಕವಾಗಿ ‘ಪೊರಕೆ ಸೇವೆ’ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.
ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿದ್ದು, ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ನಮ್ಮನ್ನು ಸಾಯಿಸಿದರೂ ಬಿಡದಿ ಟೌನ್ ಶಿಪ್ ಯೋಜನೆಗೆ ಜಮೀನು ನೀಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.
ಪ್ರತಿಭಟನೆಯ ಗದ್ದಲದ ನಡುವೆ ಕೆಲ ತರಕಾರಿ ಸಾಗಣೆ ವಾಹನಗಳು ಜಖಂಗೊಂಡಿವೆ ಎಂದು ವರದಿಯಾಗಿದೆ.
ಜಿಲ್ಲಾ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಸದ್ಯ ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.