ಡೈಲಿವಾರ್ತೆ: 14/ಜು./2026

ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ವ್ಯವಸ್ಥಾಪಕ ಎಚ್. ನಾಗರಾಜ ಹಂದೆ ನಿಧನ


ಕೋಟ: ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನದ ವ್ಯವಸ್ಥಾಪಕರಾಗಿದ್ದ ಎಚ್. ನಾಗರಾಜ ಹಂದೆ ಅವರು ಮಂಗಳವಾರ (ಜುಲೈ 14) ಮಧ್ಯಾಹ್ನ ನಿಧನರಾದರು. ಅವರು ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮೂಲತಃ ಕೋಟತಟ್ಟು–ಪಡುಕರೆ ನಿವಾಸಿಯಾಗಿದ್ದ ನಾಗರಾಜ ಹಂದೆ ಅವರು ಕೋಟ ಸಿಎ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ, ನಂತರ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕರಾಗಿ (AGM) ಪದೋನ್ನತಿ ಹೊಂದಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರವೂ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು, ಪ್ರಸ್ತುತ ಕೋಟ ಸಹಕಾರಿ ವ್ಯವಸಾಯ ಸಂಘದ ಉಪಾಧ್ಯಕ್ಷರಾಗಿ ಹಾಗೂ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸೌಮ್ಯ ಸ್ವಭಾವ, ಕರ್ತವ್ಯನಿಷ್ಠೆ ಮತ್ತು ಸಮಾಜಮುಖಿ ಸೇವೆಯಿಂದ ಗುರುತಿಸಿಕೊಂಡಿದ್ದ ಅವರ ನಿಧನಕ್ಕೆ ಧಾರ್ಮಿಕ, ಸಹಕಾರಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಸಂತಾಪ ವ್ಯಕ್ತವಾಗಿದೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.