


ಡೈಲಿವಾರ್ತೆ: 22/ಜು./2026


ಮಾಣಿ: ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದು ಯುಕೆಜಿ ಬಾಲಕಿ ಮೃತ್ಯು, ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ!

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಬಿರುಗಾಳಿಯ ನಡುವೆ ಬುಧವಾರ ನಡೆದ ಘಟನೆಯಲ್ಲಿ ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಮಾಣಿ ಸಮೀಪದ ಬರಿಮಾರು ಕಲ್ಲೆಟ್ಟಿ ದೈವಸ್ಥಾನದ ಬಳಿ ಬೃಹತ್ ಗಾತ್ರದ ಮರ ಬುಡ ಸಮೇತ ಉರುಳಿ ಬಿದ್ದ ಪರಿಣಾಮ ಯುಕೆಜಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದು, ಇನ್ನಿಬ್ಬರು ವಿದ್ಯಾರ್ಥಿನಿಯರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಮೃತ ಬಾಲಕಿಯನ್ನು ಪೆರ್ನೆ ನಿವಾಸಿ ಚಂದ್ರಶೇಖರ್ ಅವರ ಪುತ್ರಿ ಯುಕೆಜಿ ವಿದ್ಯಾರ್ಥಿನಿ ಚಿರಣ್ವಿ (5) ಎಂದು ಗುರುತಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಪೆರಾಜೆ ಸಾದಿಕುಕ್ಕು ನಿವಾಸಿ ಗಣೇಶ್ ಗೌಡ ಅವರ ಪುತ್ರಿ ಅನ್ವಿ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೋರ್ವ ಗಾಯಾಳು ಪೆರ್ನೆ ನಿವಾಸಿ ಕ್ಷಿತಿ ರೈ ಅವರನ್ನು ಕಲ್ಲಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಿಂದ ಮಕ್ಕಳನ್ನು ಕರೆದುಕೊಂಡು ಮಾಣಿ, ಅಲ್ಲಿಂದ ಬರಣಿಕೆರೆ, ಬರಿಮಾರು, ಕಲ್ಲೆಟ್ಟಿ ಮಾರ್ಗವಾಗಿ ಬುಡೋಳಿ ಮೂಲಕ ಪೆರ್ನೆಗೆ ತೆರಳುತ್ತಿದ್ದ ಶಾಲಾ ಬಸ್ ಮೇಲೆ, ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಏಕಾಏಕಿ ಬುಡ ಸಮೇತ ಉರುಳಿ ಬಿದ್ದಿದೆ.
ಮಳೆಯೊಂದಿಗೆ ಬೀಸಿದ ಬಿರುಗಾಳಿಯ ತೀವ್ರತೆಗೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮರ ಬಿದ್ದ ರಭಸಕ್ಕೆ ಬಸ್‌ನ ಮೇಲ್ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕ್ಷಣಾರ್ಧದಲ್ಲೇ ಬಸ್‌ನೊಳಗೆ ಆತಂಕದ ವಾತಾವರಣ ನಿರ್ಮಾಣವಾಯಿತು. ಸ್ಥಳೀಯರು ಕೂಡಲೇ ಧಾವಿಸಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರತೆಗೆದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
ಇದೇ ವೇಳೆ ಕಲ್ಲೆಟ್ಟಿ ದೇವಸ್ಥಾನದ ಮೇಲೂ ಬೃಹತ್ ಮರ ಉರುಳಿ ಬಿದ್ದಿದ್ದು, ದೇವಸ್ಥಾನಕ್ಕೂ ಹಾನಿಯಾಗಿದೆ. ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಹಾಗೂ ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ಈ ದುರಂತದಿಂದ ಪೆರ್ನೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಮೃತ ಬಾಲಕಿಯ ಕುಟುಂಬಕ್ಕೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಸಂತಾಪ ಸೂಚಿಸಿವೆ. ಭಾರೀ ಮಳೆ ಮತ್ತು ಬಿರುಗಾಳಿಯ ಸಂದರ್ಭಗಳಲ್ಲಿ ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವು ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂಬ ಒತ್ತಾಯವೂ ಸಾರ್ವಜನಿಕರಿಂದ ಕೇಳಿಬಂದಿದೆ.