ಡೈಲಿವಾರ್ತೆ: 22/ಜು./2026

ಮಂಗಳೂರು: ಮನೆಯ ಕಾಮಗಾರಿ ವೇಳೆ ಚಿನ್ನಾಭರಣ ಕಳವು – ಉತ್ತರ ಪ್ರದೇಶ ಮೂಲದ ಆರೋಪಿ ಸೆರೆ

ಮಂಗಳೂರು: ನಗರದ ಮೇರಿಹಿಲ್ ಬಾಂದೋಟ್ಟು ಪ್ರದೇಶದ ಮನೆಯಲ್ಲಿ ನಡೆದ ₹6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣವನ್ನು ಮಂಗಳೂರು ಗ್ರಾಮಾಂತರ ಪೊಲೀಸರು 24 ಗಂಟೆಯೊಳಗೆ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಉತ್ತರಪ್ರದೇಶದ ಜಹೀರುದ್ದೀನ್ (24) ಎಂದು ಗುರುತಿಸಲಾಗಿದೆ.

ಜುಲೈ 6ರಂದು ಮನೆಯ ಹಿಂಭಾಗದ ಕೊಠಡಿಯ ಛಾವಣಿ ಬದಲಾವಣೆ ಹಾಗೂ ಹಾಲ್‌ನಲ್ಲಿ ಫಾಲ್ಸ್ ಸೀಲಿಂಗ್ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಮನೆಯ ಟೇಬಲ್ ಡ್ರಾವರ್‌ನಲ್ಲಿದ್ದ ಸಣ್ಣ ಪರ್ಸ್‌ನೊಳಗೆ ಇರಿಸಿದ್ದ 20 ಗ್ರಾಂ ತೂಕದ ಚಿನ್ನದ ಕಡಗ, 17 ಗ್ರಾಂ ತೂಕದ ಚಿನ್ನದ ಸರ, 8 ಗ್ರಾಂ ಮತ್ತು 4 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು ಹಾಗೂ ಸೊನಾಟಾ ಕಂಪನಿಯ ಗೋಲ್ಡ್ ಕೋಟೆಡ್ ಕೈಗಡಿಯಾರ ಸೇರಿದಂತೆ ಒಟ್ಟು 49 ಗ್ರಾಂ ಚಿನ್ನಾಭರಣ ಕಳವಾಗಿತ್ತು. ಕಳವಾದ ಸೊತ್ತಿನ ಮೌಲ್ಯ ಸುಮಾರು 6.37 ಲಕ್ಷ ಎಂದು ಅಂದಾಜಿಸಲಾಗಿದೆ.

ಪ್ರಕರಣದ ತನಿಖೆ ವೇಳೆ ಮನೆ ಕಾಮಗಾರಿಗೆ ಬಂದಿದ್ದ ಕಾರ್ಮಿಕ ಉತ್ತರ ಪ್ರದೇಶದ ಪ್ರಸ್ತುತ ಅಜಿಜುದ್ದೀನ್ ರಸ್ತೆ, ಬಂದರು, ಮಂಗಳೂರು ನಿವಾಸಿಯಾಗಿರುವ ಜಹೀರುದ್ದೀನನ್ನು ವಿಚಾರಣೆ ನಡೆಸಿದಾಗ ಆರೋಪಿ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

ಆರೋಪಿಯಿಂದ ಕಳವಾಗಿದ್ದ 49 ಗ್ರಾಂ ಚಿನ್ನಾಭರಣ ಹಾಗೂ ಗೋಲ್ಡ್ ಕೋಟೆಡ್ ಕೈಗಡಿಯಾರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.