ಡೈಲಿವಾರ್ತೆ:12/ಸೆ./2026

ಹೆಬ್ಬಾವನ್ನೇ ನುಂಗಿದ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ: ಸುರಕ್ಷಿತ ರಕ್ಷಣೆ!

ಬೆಳ್ತಂಗಡಿ: ತಾಲೂಕಿನ ತೆಂಕಕಾರಂದೂರು ಗ್ರಾಮದ ಕಡಿಂಗದಲ್ಲಿ ಮನೆಯೊಂದರ ತೋಟದಲ್ಲಿ ಹೆಬ್ಬಾವನ್ನು ನುಂಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡ 12 ಅಡಿಗೂ ಅಧಿಕ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಉರಗ ರಕ್ಷಕ ಲಾಯಿಲ ಗ್ರಾಮದ ಸ್ನೇಕ್ ಅಶೋಕ್ ಅವರು ಸುರಕ್ಷಿತವಾಗಿ ರಕ್ಷಿಸಿ, ಅರಣ್ಯ ಇಲಾಖೆಯ ಮೂಲಕ ರಕ್ಷಿತಾರಣ್ಯಕ್ಕೆ ಬಿಡಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಕಡಿಂಗ ನಿವಾಸಿ ಹಿತೇಶ್ ಅವರ ಮನೆಯ ತೋಟದಲ್ಲಿ ಶುಕ್ರವಾರ ಸಂಜೆ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಮನೆಯವರು ಗಮನಿಸಿದಾಗ ಕಾಳಿಂಗ ಸರ್ಪವು ಹೆಬ್ಬಾವನ್ನು ನುಂಗಿದ ಸ್ಥಿತಿಯಲ್ಲಿರುವುದು ಕಂಡುಬಂದಿದ್ದು, ಆತಂಕಗೊಂಡ ಮನೆಯವರು ತಕ್ಷಣ ಉರಗ ರಕ್ಷಕ ಸ್ನೇಕ್ ಅಶೋಕ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು.

ಮಾಹಿತಿ ದೊರೆತ ಕೂಡಲೇ ಸ್ನೇಕ್ ಅಶೋಕ್ ಅವರು ತಮ್ಮ ಸ್ನೇಹಿತ ಪ್ರತೀಕ್ ಅವರೊಂದಿಗೆ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಕಾಳಿಂಗ ಸರ್ಪದ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಿ, ಮನೆಯವರಿಗೆ ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಕಾಳಿಂಗ ಸರ್ಪವು ತಾನು ನುಂಗಿದ್ದ ಹೆಬ್ಬಾವನ್ನು ವಾಂತಿ ಮಾಡಿದೆ. ಬಳಿಕ ಅಶೋಕ್ ಹಾಗೂ ಪ್ರತೀಕ್ ಅವರು ಅತ್ಯಂತ ಎಚ್ಚರಿಕೆಯಿಂದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದರು. ನಂತರ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಕಾಳಿಂಗ ಸರ್ಪವನ್ನು ಸೂಕ್ತ ರಕ್ಷಿತಾರಣ್ಯಕ್ಕೆ ಬಿಡಲಾಯಿತು.