ಡೈಲಿವಾರ್ತೆ:13/ಸೆ./2026

ಹುಬ್ಬಳ್ಳಿ: ಗಣೇಶ ಮೆರವಣಿಗೆಯಲ್ಲಿ ಮಹಿಳೆಯರೊಂದಿಗೆ ಅಸಭ್ಯ ವರ್ತನೆ – ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲು

ಹುಬ್ಬಳ್ಳಿ: ಗಣೇಶೋತ್ಸವದ ಅಂಗವಾಗಿ ನಗರದಲ್ಲಿ ನಡೆಯುತ್ತಿದ್ದ ಗಣಪತಿ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಪರಿಚಿತ ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸಿದ ಘಟನೆ ಸೆ.12ರಂದು ರಾತ್ರಿ ನಡೆದಿದೆ.

ರಾತ್ರಿ ಸುಮಾರು 9.30ರ ವೇಳೆಗೆ ಮರಾಠ ಗಲ್ಲಿಯಿಂದ ಸಿಬಿಟಿ ಕಡೆಗೆ ತೆರಳುವ ರಸ್ತೆಯ ಬಳಿ ಮೇದಾರ್ ಓಣಿಯ ಗಣಪತಿ ಹಾಗೂ ಕಲಾಲ್ ಓಣಿಯ ಗಣಪತಿ ಮೆರವಣಿಗೆಗಳು ಮುಖಾಮುಖಿಯಾಗಿದ್ದವು. ಈ ವೇಳೆ ಕಲಾಲ್ ಓಣಿಯ ಗಣಪತಿ ಮೆರವಣಿಗೆಯ ಡಿಜೆ ವಾಹನದ ಮುಂಭಾಗದಲ್ಲಿ ಕೆಲ ಯುವಕರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ.

ಘಟನೆ ಗಮನಕ್ಕೆ ಬರುತ್ತಿದ್ದಂತೆ ಕಿಡಿಗೇಡಿಗಳನ್ನು ಅಲ್ಲಿಂದ ಚದುರಿಸಲಾಯಿತು. 30 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ ಕನಿಷ್ಠ ಬಲಪ್ರಯೋಗದ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು ಎಂದು ಪೊಲೀಸ್ ಕಮಿಷನರ್ ಭೂಷಣ ಬೋರಸೆ ತಿಳಿಸಿದ್ದಾರೆ.

ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಅಪರಿಚಿತ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿ, ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ತಮ್ಮ ಅಧಿಕೃತ ವಾಟ್ಸ್‌ಆಪ್ ಖಾತೆ ಮೂಲಕ ಮಾಹಿತಿ ನೀಡಿದ್ದಾರೆ.

ಗಣೇಶೋತ್ಸವದಂತಹ ಸಾರ್ವಜನಿಕ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ ಹಾಗೂ ಮಹಿಳೆಯರ ಸುರಕ್ಷತೆಗೆ ಧಕ್ಕೆಯಾಗುವ ಯಾವುದೇ ರೀತಿಯ ವರ್ತನೆಗೆ ಅವಕಾಶ ನೀಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.