


ಡೈಲಿವಾರ್ತೆ:13/ಸೆ./2026

ಶಾಸಕ ಸುನಿಲ್ ಕುಮಾರ್ ತಲೆ ಕತ್ತರಿಸಿದಂತೆ ಚಿತ್ರ ಎಡಿಟ್: ಆರೋಪಿ ಪೊಲೀಸ್ ವಶಕ್ಕೆ

ಕಾರ್ಕಳ: ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ಚಿತ್ರವನ್ನು ತಲೆ ಕತ್ತರಿಸಿದ ರೀತಿಯಲ್ಲಿ ಎಡಿಟ್ ಮಾಡಿ, ಅವಾಚ್ಯ ಶಬ್ದಗಳು ಹಾಗೂ ಪ್ರಚೋದನಕಾರಿ ಹಿನ್ನೆಲೆ ಧ್ವನಿಯೊಂದಿಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಡಿ ಪ್ರಸಾದ್ ಶೆಟ್ಟಿ ಎಂಬಾತನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳದ ವಿಫೇಶ್ ಪ್ರಸಾದ್ ರಾವ್ ಅವರು ಸೆ.12ರ ರಾತ್ರಿ ಫೇಸ್‌ಬುಕ್ ವೀಕ್ಷಿಸುತ್ತಿದ್ದ ವೇಳೆ ಪ್ರಸಾದ್ ಶೆಟ್ಟಿ ಎಂಬ ಫೇಸ್‌ಬುಕ್ ಖಾತೆಯಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಅವರ ಚಿತ್ರವನ್ನು ಆಕ್ಷೇಪಾರ್ಹ ರೀತಿಯಲ್ಲಿ ಎಡಿಟ್ ಮಾಡಿ ವಿಡಿಯೋ ಪ್ರಕಟಿಸಿರುವುದು ಗಮನಕ್ಕೆ ಬಂದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶಾಸಕರನ್ನು ಹೊಡೆಯಬೇಕು, ಕೊಲೆ ಮಾಡಬೇಕು ಎಂಬ ರೀತಿಯಲ್ಲಿ ಸಾರ್ವಜನಿಕರನ್ನು ಪ್ರಚೋದಿಸುವ ಉದ್ದೇಶದಿಂದ ವಿಡಿಯೋವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇಂತಹ ಪ್ರಚೋದನಕಾರಿ ವಿಡಿಯೋದಿಂದ ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಪ್ರಸಾದ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ.