ಡೈಲಿವಾರ್ತೆ:13/ಸೆ./2026

ಹಿರಿಯ ರಂಗ ನಿರ್ದೇಶಕ ಚಿದಂಬರರಾವ್ ಜಂಬೆ ನಿಧನ

ಶಿವಮೊಗ್ಗ: ಕನ್ನಡ ರಂಗಭೂಮಿಯ ಹಿರಿಯ ರಂಗ ನಿರ್ದೇಶಕ, ರಂಗಶಿಕ್ಷಣ ತಜ್ಞ ಚಿದಂಬರರಾವ್ ಜಂಬೆ ಅವರು ಸಾಗರ ತಾಲೂಕಿನ ಹೆಗ್ಗೋಡು ಗ್ರಾಮದ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದರು.

ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಕನ್ನಡ ರಂಗಭೂಮಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದ ಚಿದಂಬರರಾವ್ ಜಂಬೆ ಅವರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆದಿದ್ದರು. ಬಳಿಕ ಅದೇ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವ ಮೂಲಕ ರಂಗಭೂಮಿ ಹಾಗೂ ರಂಗಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದರು.

ಹೆಗ್ಗೋಡಿನ ನೀನಾಸಂ ರಂಗ ಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಅವರು, ಸಾಣೇಹಳ್ಳಿಯ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ ಮೈಸೂರು ರಂಗಾಯಣದ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡು ರಂಗಭೂಮಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದರು.

ರಂಗ ನಿರ್ದೇಶನ, ರಂಗಶಿಕ್ಷಣ ಹಾಗೂ ಕಲಾವಿದರ ತರಬೇತಿ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸಕ್ರಿಯರಾಗಿದ್ದ ಜಂಬೆ ಅವರ ನಿಧನದಿಂದ ಕನ್ನಡ ರಂಗಭೂಮಿ ಒಬ್ಬ ಹಿರಿಯ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ. ಅವರ ನಿಧನಕ್ಕೆ ರಂಗಭೂಮಿ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.