


ಡೈಲಿವಾರ್ತೆ:23/ಆಗಸ್ಟ್ /2026

ಮಂಗಳೂರು: ಮೀನುಗಾರಿಕೆ ತೆರಳಿದ್ದ ಪರ್ಸಿನ್ ಬೋಟ್ ಮುಳುಗಡೆ – 6 ಮಂದಿ ಮೀನುಗಾರರ ರಕ್ಷಣೆ, ಲಕ್ಷಾಂತರ ರೂ. ನಷ್ಟ!

ಮಂಗಳೂರು: ಮೀನುಗಾರಿಕೆ ಮುಗಿಸಿ ಬಂದರಿಗೆ ವಾಪಸ್ ಆಗುತ್ತಿದ್ದ ಪರ್ಸಿನ್ ಬೋಟ್‌ವೊಂದು ಅಳಿವೆಬಾಗಿಲಿನಲ್ಲಿ ಕಲ್ಲಿಗೆ ಬಡಿದು ಸಂಪೂರ್ಣ ಮುಳುಗಡೆಯಾದ ಘಟನೆ ನಡೆದಿದೆ.
ಇಬ್ರಾಹಿಂ ಖಲೀಲ್ ಅವರಿಗೆ ಸೇರಿದ ‘ಅಯಾನ್’ ಹೆಸರಿನ ಪರ್ಸಿನ್ ಬೋಟ್ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ಮಂಗಳೂರು ಬಂದರಿನತ್ತ ವಾಪಸ್ ಬರುತ್ತಿದ್ದ ವೇಳೆ ಅಳಿವೆಬಾಗಿಲಿನಲ್ಲಿ ಬೋಟ್‌ನ ತಳಭಾಗ ಕಲ್ಲಿಗೆ ಬಡಿದಿದೆ. ಪರಿಣಾಮ ಬೋಟ್‌ನ ಕೆಳಭಾಗಕ್ಕೆ ಗಂಭೀರ ಹಾನಿಯಾಗಿದ್ದು, ಬೋಟ್‌ನೊಳಗೆ ನೀರು ನುಗ್ಗಲಾರಂಭಿಸಿದೆ.
ನೀರು ವೇಗವಾಗಿ ಒಳನುಗ್ಗಿದ ಪರಿಣಾಮ ಕೆಲವೇ ಸಮಯದಲ್ಲಿ ಬೋಟ್ ಮುಳುಗುವ ಸ್ಥಿತಿ ನಿರ್ಮಾಣವಾಗಿದ್ದು, ಅದರಲ್ಲಿದ್ದ ಆರು ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ಪರಿಸ್ಥಿತಿಯನ್ನು ಗಮನಿಸಿದ ಸುತ್ತಮುತ್ತಲಿನ ಇತರ ಮೀನುಗಾರಿಕಾ ಬೋಟ್‌ಗಳಲ್ಲಿದ್ದ ಮೀನುಗಾರರು ತಕ್ಷಣ ಕಾರ್ಯಾಚರಣೆ ನಡೆಸಿ, ಅಪಾಯದಲ್ಲಿದ್ದ ಆರು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಆದರೆ ಮೀನುಗಾರರ ರಕ್ಷಣೆಯ ಬಳಿಕವೂ ‘ಅಯಾನ್’ ಪರ್ಸಿನ್ ಬೋಟ್‌ನ್ನು ಮುಳುಗಡೆಯಿಂದ ತಪ್ಪಿಸಲು ಸಾಧ್ಯವಾಗದೆ, ಅಳಿವೆಬಾಗಿಲಿನಲ್ಲೇ ಸಂಪೂರ್ಣವಾಗಿ ಮುಳುಗಿದೆ. ಬೋಟ್ ಸಂಪೂರ್ಣ ಹಾನಿಯಾಗಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.