ಡೈಲಿವಾರ್ತೆ:27/ಆಗಸ್ಟ್ /2026

ಉಡುಪಿ: ಮನೆ ಕಳ್ಳತನ ಪ್ರಕರಣ – ₹23.56 ಲಕ್ಷ ಮೌಲ್ಯದ ಸ್ವತ್ತು ವಶ, ಇಬ್ಬರ ಬಂಧನ

ಉಡುಪಿ: ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು ₹23.56 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ, ವಿದೇಶಿ ಕರೆನ್ಸಿ, ನಗದು ಸೇರಿದಂತೆ ವಿವಿಧ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ಪೆರಂಪಳ್ಳಿ ಕುಂಜಿಬೆಟ್ಟು ನಿವಾಸಿ ಅರುಣ್ ಎಸ್.ವಿ. (43) ಹಾಗೂ ತೆಂಕನಿಡಿಯೂರು ಗ್ರಾಮದ ಕೌಶೀಕ್ (19) ಎಂದು ಗುರುತಿಸಲಾಗಿದೆ.

ಉಡುಪಿ ಪುತ್ತೂರು ಗ್ರಾಮದ ಭಗವತಿ ಲೇಔಟ್ ನಿವಾಸಿ ಸನಂ (39) ಅವರು ದುಬೈಯಿಂದ ಊರಿಗೆ ಬಂದಿದ್ದು, ಪತಿ ವಿದೇಶಕ್ಕೆ ತೆರಳಿದ ಬಳಿಕ ಆ.8ರಂದು ಸಂಬಂಧಿಕರ ಮನೆಗೆ ತೆರಳಿದ್ದರು. ಆ.11ರಂದು ಬೆಳಗ್ಗೆ 11.30ಕ್ಕೆ ಮನೆಗೆ ವಾಪಸ್‌ ಬಂದಾಗ ಟೆರೇಸ್‌ ಬಾಗಿಲನ್ನು ಆಯುಧ ಬಳಸಿ ಬಲವಂತವಾಗಿ ತೆರೆಯಲಾಗಿರುವುದು ಪತ್ತೆಯಾಗಿತ್ತು.
ಮನೆಯ ಕಪಾಟಿನ ಡ್ರಾವರ್‌ನಲ್ಲಿದ್ದ 10,000 ಎಇಡಿ ವಿದೇಶಿ ಕರೆನ್ಸಿ ಹಾಗೂ ₹14,000 ನಗದು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಹಾಗೂ ಆರೋಪಿಗಳ ಪತ್ತೆಗಾಗಿ ಪೊಲೀಸ್‌ ಅಧಿಕಾರಿಗಳ ನಿರ್ದೇಶನದಂತೆ ಉಡುಪಿ ನಗರ ಠಾಣಾ ಪೊಲೀಸ್‌ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ (ತನಿಖೆ) ಪ್ರಕಾಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ತಂಡ ಆ.23ರಂದು ಪೆರಂಪಳ್ಳಿ ಸಂತೋಷನಗರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.

ಬಂಧಿತರಿಂದ ಚಿನ್ನ, ಬೆಳ್ಳಿ, ವಿದೇಶಿ ಕರೆನ್ಸಿ ಹಾಗೂ ಸುಮಾರು 88.400 ಗ್ರಾಂ ಚಿನ್ನ, 1 ಕೆಜಿ 360 ಗ್ರಾಂ ಬೆಳ್ಳಿ ಆಭರಣ, 1.45 ಗ್ರಾಂ ಚಿನ್ನದ ನಾಣ್ಯಗಳು, ವಿದೇಶಿ ಕರೆನ್ಸಿ, ₹33,000 ನಗದು, ಎರಡು ಮೊಬೈಲ್ ಫೋನ್‌ಗಳು, ವಿದೇಶಿ ಕೈಗಡಿಯಾರ, ಆಟೋರಿಕ್ಷಾ ಹಾಗೂ ಕೃತ್ಯಕ್ಕೆ ಬಳಸಿದ್ದ ಕಳವುಗೈದ ಪಲ್ಸರ್ ಬೈಕ್ ಸೇರಿದಂತೆ ವಿವಿಧ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ₹23,56,230 ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ನಡೆಸುತ್ತಿದ್ದರು ಎನ್ನಲಾಗಿದೆ. ಕಳವು ಮಾಡಿದ ಪಲ್ಸರ್ ಬೈಕ್‌ನಲ್ಲಿ ಸಂಚರಿಸಿ ಮನೆಗಳನ್ನು ಗುರುತಿಸಿ ಬಳಿಕ ಕಳ್ಳತನಕ್ಕೆ ಮುಂದಾಗುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಉಡುಪಿ ನಗರ ಹಾಗೂ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಐದು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.

ಕೊಡಂಕೂರು ಗ್ರಾಮದ ಶಶಿರೇಖಾ ಅವರ ಮನೆ, ಪುತ್ತೂರು ಗ್ರಾಮದ ಭಗವತಿ ಲೇಔಟ್‌ನ ಸನಂ ಅವರ ಮನೆ, ನೇಜಾರು ಮಸೀದಿ ಬಳಿಯ ಗ್ಯಾರೇಜ್‌ನಿಂದ ಸಂದೇಶ್ ಅವರ ಪಲ್ಸರ್ ಬೈಕ್ ಕಳವು ಹಾಗೂ ಕೆಳಾರ್ಕಳಬೆಟ್ಟುವಿನ ತೃಪ್ತಿ ಅವಿನಾಶ್ ಮತ್ತು ರವಿ ಉಪಾಧ್ಯ ಅವರ ಮನೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳು ಇದರಲ್ಲಿ ಸೇರಿವೆ.

ಬಂಧಿತರ ಪೈಕಿ ಅರುಣ್ ಆಚಾರಿ ಈ ಹಿಂದೆ ಮಣಿಪಾಲ ಠಾಣಾ ವ್ಯಾಪ್ತಿಯ ಪೋಕ್ಸೋ ಪ್ರಕರಣದಲ್ಲಿ ಒಂಬತ್ತು ವರ್ಷಗಳ ಕಾರಾಗೃಹ ಶಿಕ್ಷೆ ಅನುಭವಿಸಿದ್ದು, 2025ರ ಜುಲೈನಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್‌ ಅಧೀಕ್ಷಕ ಹರಿರಾಮ್ ಶಂಕರ್, ಐಪಿಎಸ್ ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.