


ಡೈಲಿವಾರ್ತೆ:28/ಆಗಸ್ಟ್ /2026

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಉಡುಪಿ ಮೂಲದ ಪೈಲಟ್ ಅಭಿಷೇಕ್ ಪೂಜಾರಿ ಮೃತ್ಯು!

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಗುರುವಾರ ಸಂಭವಿಸಿದ ತರಬೇತಿ ವಿಮಾನ ಅಪಘಾತದಲ್ಲಿ ಕರ್ನಾಟಕದ ತರಬೇತಿ ಪೈಲಟ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಗಂಗಾ ನದಿ ಬಳಿಯ ನತ್ತುಪುರವಾ ಗ್ರಾಮದ ಸಮೀಪದ ಗಂಗಾ ಬ್ಯಾರೇಜ್ ಪ್ರದೇಶದಲ್ಲಿ ಡಬಲ್ ಎಂಜಿನ್ ವಿಮಾನ ಪತನಗೊಂಡಿದೆ.
ಮೃತರನ್ನು ಗುಜರಾತ್ ಮೂಲದ ಬೋಧಕ ಪೈಲಟ್ ಸಚಿನ್ ಭಾಟಿಯಾ ಹಾಗೂ ಕರ್ನಾಟಕದ ಉಡುಪಿ ಮೂಲದ ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ.
ಮೃತ ಅಭಿಷೇಕ್ ಪೂಜಾರಿ ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕಣಜಾರು ಗ್ರಾಮದ ಕಡೇಬೆರ್ಕೆ ಮೂಲದವರಾಗಿದ್ದು ಅವರು ಎರಡೂವರೆ ವರ್ಷಗಳಿಂದ ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ಟ್ರೈನಿ ಪೈಲಟ್ ಆಗಿ ತರಬೇತಿ ಪಡೆಯುತ್ತಿದ್ದರು.
ಅವರ ತಂದೆ ಪ್ರಭಾಕರ ಪೂಜಾರಿ ಹಾಗೂ ತಾಯಿ ಶಶಿಕಲಾ ಪೂಜಾರಿ ಅವರು ಮಹಾರಾಷ್ಟ್ರದ ಮುಂಬೈನಲ್ಲಿ ವಾಸವಾಗಿದ್ದಾರೆ. ಅಭಿಷೇಕ್ ಅವರು ಆಗಾಗ್ಗೆ ಕುಟುಂಬದೊಂದಿಗೆ ಹಿರಿಯಡ್ಕ ಕಣಜಾರು ಗ್ರಾಮದ ಕಡೇಬೆರ್ಕೆಯಲ್ಲಿರುವ ತಾಯಿಯ ಸಹೋದರ ಜೀವನ್ ಕುಮಾರ್ ಅವರ ಮನೆಗೆ ಆಗಮಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪೊಲೀಸ್ ಆಯುಕ್ತ ರಘುಬೀರ್ ಲಾಲ್ ನೀಡಿರುವ ಮಾಹಿತಿಯಂತೆ ವಿಮಾನವು ಆ.27 ರಂದು ಬೆಳಗ್ಗೆ ಸುಮಾರು 11.30ಕ್ಕೆ ತರಬೇತಿ ಕೇಂದ್ರದಿಂದ ಹಾರಾಟ ಆರಂಭಿಸಿತ್ತು. ತರಬೇತಿ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಸುಮಾರು 20 ನಿಮಿಷಗಳ ಬಳಿಕ ವಿಮಾನ ಪತನಗೊಂಡಿದೆ. ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ವಿಮಾನ ಪತನದ ಘಟನೆಯ ಬಳಿಕ ಅಭಿಷೇಕ್ ಅವರ ಕುಟುಂಬಸ್ಥರು ಮುಂದಿನ ಕಾನೂನು ಪ್ರಕ್ರಿಯೆಗಳಿಗಾಗಿ ಕಾನ್ಪುರಕ್ಕೆ ತೆರಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಹಾಗೂ ಮುಂದಿನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಮಾಹಿತಿ ಎಸ್ಪಿ ಕಚೇರಿ ಪ್ರಕಟಣೆ ತಿಳಿಸಿದೆ.