ಡೈಲಿವಾರ್ತೆ:30/ಆಗಸ್ಟ್ /2026

ಪ್ರಮೋಷನ್ ಆಸೆ ತೋರಿಸಿ ₹50 ಸಾವಿರ ಲಂಚ?: ಸಾಲ ಬಾಧೆಗೆ ಬೈಕ್ ಸಹಿತ ತುಂಗಾ ನಾಲೆಗೆ ಹಾರಿ ಬ್ಯಾಂಕ್ ಸಿಬ್ಬಂದಿ ಆತ್ಮಹತ್ಯೆ

ದಾವಣಗೆರೆ: ಪ್ರಮೋಷನ್ ನೀಡುವುದಾಗಿ ಭರವಸೆ ನೀಡಿ ಹಣ ಪಡೆದುಕೊಂಡರೂ ಪದೋನ್ನತಿ ನೀಡದ ಆರೋಪ ಹಾಗೂ ಸಾಲದ ಬಾಧೆಯಿಂದ ನೊಂದ ಬ್ಯಾಂಕ್ ಸಿಬ್ಬಂದಿಯೊಬ್ಬರು ಸೆಲ್ಫಿ ವೀಡಿಯೋ ಮಾಡಿ ತುಂಗಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕಾಸ್ಪದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾದನಬಾವಿ ಗ್ರಾಮದ ಸಮೀಪ ನಡೆದಿದೆ.

ಮೃತರನ್ನು ಮೋಹನ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಪ್ರಮೋಷನ್ ನೀಡುವುದಾಗಿ ಹೇಳಿ ಕೆಲವರು ತನ್ನಿಂದ ನಕಲಿ ಅಂಕಪಟ್ಟಿಗಾಗಿ ₹50 ಸಾವಿರ ಹಣ ಪಡೆದುಕೊಂಡಿದ್ದರು ಎಂದು ಮೋಹನ್ ಕುಮಾರ್ ತಮ್ಮ ಸೆಲ್ಫಿ ವೀಡಿಯೋದಲ್ಲಿ ಆರೋಪಿಸಿದ್ದಾರೆ. ಈ ಹಣವನ್ನು ತಾವು ಸಾಲ ಮಾಡಿ ನೀಡಿದ್ದು, ಬಳಿಕ ಭರವಸೆ ನೀಡಿದಂತೆ ಪ್ರಮೋಷನ್ ದೊರೆಯದ ಕಾರಣ ತೀವ್ರ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.

ತಮ್ಮ ಸಾವಿಗೆ ಬ್ಯಾಂಕ್ ಸಿಬ್ಬಂದಿ ತಿಪ್ಪೇಸ್ವಾಮಿ ಹಾಗೂ ನಕಲಿ ಅಂಕಪಟ್ಟಿ ಮಾಡಿಕೊಟ್ಟಿದ್ದಾನೆ ಎನ್ನಲಾದ ಕೊಟ್ರೇಶ್ ಕಾರಣ ಎಂದು ಮೋಹನ್ ಕುಮಾರ್ ಸೆಲ್ಫಿ ವೀಡಿಯೋದಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ತನಗೆ ನ್ಯಾಯ ಒದಗಿಸಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ವೀಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬಳಿಕ ಮೋಹನ್ ಕುಮಾರ್ ತಮ್ಮ ಬೈಕ್ ಸಹಿತ ತುಂಗಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ನಡೆದ ಸ್ಥಳದಲ್ಲಿ ಅವರ ಬೈಕ್ ಪತ್ತೆಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ನಾಲೆಯಲ್ಲಿ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸೆಲ್ಫಿ ವೀಡಿಯೋದಲ್ಲಿರುವ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.