


ಡೈಲಿವಾರ್ತೆ:04/ಸೆ./2026

ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲಕ್ಕೆ ವಿಧಾನಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಭೇಟಿ: ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ: ಮುಂದಿನ ಕಾರ್ಯತಂತ್ರಕ್ಕೆ ರಾಜ್ಯ ಸರ್ಕಾರದೊಂದಿಗೆ ಚರ್ಚೆ – ಡಾ. ಆರತಿ ಕೃಷ್ಣ

ಕೋಟ: ಅನಿವಾಸಿ ಕನ್ನಡಿಗರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಕುರಿತು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಭರವಸೆ ನೀಡಿದ್ದು, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಕಾರ್ಯತಂತ್ರ ರೂಪಿಸಲಾಗುವುದು ಎಂದು ಅನಿವಾಸಿ ಭಾರತೀಯ ಸಮಿತಿ ಕರ್ನಾಟಕದ ಅಧ್ಯಕ್ಷೆ ಹಾಗೂ ವಿಧಾನಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಹೇಳಿದರು.

ಶುಕ್ರವಾರ ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸುಭದ್ರ ಹಾಗೂ ಜನಸ್ನೇಹಿ ಆಡಳಿತ ನೀಡುತ್ತಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಕೊಲ್ಲೂರು ಸೇರಿದಂತೆ ವಿವಿಧ ಪ್ರಮುಖ ದೇಗುಲಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿದ ಅವರು, ಕಾಂಗ್ರೆಸ್ ಮುಖಂಡರೊಂದಿಗೆ ಕೋಟದ ಅಮೃತೇಶ್ವರಿ ದೇಗುಲಕ್ಕೂ ಭೇಟಿ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಈ ದೇಗುಲದಲ್ಲಿ ವಿಶೇಷ ಸೇವೆ ಸಲ್ಲಿಸುವ ಉದ್ದೇಶವಿದೆ ಎಂದರು.

ದೇಗುಲ ಅಭಿವೃದ್ಧಿಗೆ ಸರ್ಕಾರದ ಸಹಕಾರದ ಭರವಸೆ:
ಅಮೃತೇಶ್ವರಿ ದೇಗುಲದ ಅಭಿವೃದ್ಧಿಗೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೆ. ಎಸ್. ಬಸವಂತಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದು ಡಾ. ಆರತಿ ಕೃಷ್ಣ ತಿಳಿಸಿದರು. ದೇಗುಲದಲ್ಲಿ ಸಭಾಭವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದ ಸಹಕಾರ ದೊರಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ದೇಗುಲದ ಅಧ್ಯಕ್ಷ ಆನಂದ ಸಿ. ಕುಂದರ್ ಅವರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದೇಗುಲದ ಅಧ್ಯಕ್ಷರ ವತಿಯಿಂದ ಡಾ. ಆರತಿ ಕೃಷ್ಣ ಅವರನ್ನು ಶಾಲು ಹೊದಿಸಿ ಗೌರವಿಸಿ, ಪ್ರಸಾದ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ತಿಮ್ಮ ಪೂಜಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಜಿತ್ ಶೆಟ್ಟಿ ಯಾಳಹಕ್ಲು, ರಮೇಶ್ ಮೆಂಡನ್, ಸೌಜನ್ಯ ಕುಮಾರ್ ಸಾಲಿಗ್ರಾಮ, ಜಯರಾಮ ಶೆಟ್ಟಿ, ಯುವ ಕಾಂಗ್ರೆಸ್‌ನ ರಂಜಿತ್ ಬಾರಿಕೆರೆ, ದೇವೇಂದ್ರ ಗಾಣಿಗ, ಗಣೇಶ್ ಪೂಜಾರಿ, ದೇವದಾಸ್ ಕಾಂಚನ್ ಹಾಗೂ ದೇಗುಲದ ಟ್ರಸ್ಟಿಗಳಾದ ಸುಭಾಶ್ ಶೆಟ್ಟಿ ಗಿಳಿಯಾರು, ಚಂದ್ರ ಆಚಾರ್, ಶಿವ ಪೂಜಾರಿ, ರತನ್ ಐತಾಳ್, ಗಣೇಶ್ ನೆಲ್ಲಿಬೆಟ್ಟು, ಸುಬ್ರಾಯ ಜೋಗಿ, ಸುಧಾ ಪೂಜಾರಿ, ಜ್ಯೋತಿ ಡಿ. ಕಾಂಚನ್ ಉಪಸ್ಥಿತರಿದ್ದರು.
ಅರ್ಚಕರಾದ ದಾಮೋದರ ಜೋಗಿ, ಸಂದೇಶ್ ಜೋಗಿ ಸೇರಿದಂತೆ ದೇಗುಲದ ಭಕ್ತರು ಹಾಗೂ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.