


ಡೈಲಿವಾರ್ತೆ:05/ಸೆ./2026

ಮಕ್ಕಳೊಂದಿಗೆ ಕಂದಕಕ್ಕೆ ಜಿಗಿದ ಮಹಿಳಾ ಕುಸ್ತಿಪಟು: ಮೂವರ ದಾರುಣ ಅಂತ್ಯ

ಮಹಾರಾಷ್ಟ್ರ: ಐತಿಹಾಸಿಕ ನಳದುರ್ಗ ಕೋಟೆಯ 100 ಅಡಿ ಆಳದ ಕಂದಕಕ್ಕೆ ರಾಷ್ಟ್ರೀಯ ಮಟ್ಟದ ಮಹಿಳಾ ಕುಸ್ತಿಪಟುವೊಬ್ಬರು ತಮ್ಮ ಮೂವರು ಮಕ್ಕಳೊಂದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯಲ್ಲಿ ಮಹಿಳಾ ಕುಸ್ತಿಪಟು ಹಾಗೂ ಆಕೆಯ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಮತ್ತೋರ್ವ ಮಗಳು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಮೃತ ಕುಸ್ತಿಪಟುವನ್ನು ಅಶ್ವಿನ್ ಮನೋಹರ್ ಪೌಲ್ ಎಂದು ಗುರುತಿಸಲಾಗಿದೆ. ಆಕೆಯ ಐದೂವರೆ ವರ್ಷದ ಮಗ ಅಜಿಂಕ್ಯ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಎರಡುವರೆ ವರ್ಷದ ಅವಳಿ ಹೆಣ್ಣು ಮಕ್ಕಳಲ್ಲಿ ಒಬ್ಬಳಾದ ಕ್ರಾಂತಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಮತ್ತೊಬ್ಬ ಅವಳಿ ಮಗಳಾದ ವೀರಾ ಗಂಭೀರವಾಗಿ ಗಾಯಗೊಂಡಿದ್ದು, ಧಾರಾಶಿವ್ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದುಬಂದಿದೆ.
ಈ ಭೀಕರ ಘಟನೆ ಮಹಾರಾಷ್ಟ್ರದಾದ್ಯಂತ ತೀವ್ರ ಆಘಾತ ಮೂಡಿಸಿದ್ದು, ಕ್ರೀಡಾ ವಲಯದಲ್ಲಿಯೂ ಶೋಕದ ವಾತಾವರಣ ನಿರ್ಮಾಣವಾಗಿದೆ.
ಪತಿ ಹಾಗೂ ಅತ್ತೆ-ಮಾವಂದಿರಿಂದ ಅಶ್ವಿನ್ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಒಳಗಾಗುತ್ತಿದ್ದರು ಎಂಬ ಗಂಭೀರ ಆರೋಪವನ್ನು ಆಕೆಯ ತಂದೆ ಮಾಡಿದ್ದಾರೆ. ಇದೇ ಕಿರುಕುಳದಿಂದ ಮನನೊಂದು ಅಶ್ವಿನ್ ಈ ಕಠಿಣ ನಿರ್ಧಾರಕ್ಕೆ ಬಂದಿರಬಹುದು ಎಂದು ಅವರು ಆರೋಪಿಸಿದ್ದಾರೆ.