


ಡೈಲಿವಾರ್ತೆ:06/ಸೆ./2026

ಉಡುಪಿ: ವಿಟ್ಲಪಿಂಡಿ ಉತ್ಸವದಲ್ಲಿ ಅನಿರೀಕ್ಷಿತ ಅವಘಡ: ಸ್ವಾಮೀಜಿಗಳ ಕೈಯಿಂದ ಜಾರಿ ಭಗ್ನವಾದ ಕೃಷ್ಣನ ಮೂರ್ತಿ

ಉಡುಪಿ, ಸೆ.6: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅದ್ಧೂರಿಯಾಗಿ ನಡೆದ ವಿಟ್ಲಪಿಂಡಿ ಉತ್ಸವದ ಅಂತಿಮ ಹಂತದಲ್ಲಿ ಅನಿರೀಕ್ಷಿತ ಅವಘಡವೊಂದು ಸಂಭವಿಸಿದ್ದು, ಚಿನ್ನದ ರಥದಲ್ಲಿ ರಥಾರೂಢವಾಗಿದ್ದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಇಳಿಸುವ ವೇಳೆ ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಗಳ ಕೈಯಿಂದ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದು ಭಗ್ನವಾಗಿದೆ.
ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ಶ್ರೀಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಮಹೋತ್ಸವವು ಭಕ್ತರ ಅಪಾರ ಉಪಸ್ಥಿತಿಯಲ್ಲಿ ವೈಭವದಿಂದ ನೆರವೇರಿತು. ಚಾತುರ್ಮಾಸದ ಹಿನ್ನೆಲೆ ಪ್ರತಿಷ್ಠಾಪಿಸಲಾಗಿದ್ದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಚಿನ್ನದ ರಥದಲ್ಲಿ ರಥಾರೂಢಗೊಳಿಸಿ ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ಉತ್ಸವದ ಬಳಿಕ ಮಣ್ಣಿನ ಮೂರ್ತಿಯನ್ನು ರಥದಿಂದ ಇಳಿಸಿ ಮಧ್ವ ಸರೋವರದಲ್ಲಿ ವಿಸರ್ಜನೆಗೆ ಕೊಂಡೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಗಳ ಕೈಯಲ್ಲಿದ್ದ ಕೃಷ್ಣನ ಮೂರ್ತಿ ಏಕಾಏಕಿ ಜಾರಿ ಕೆಳಗೆ ಬಿದ್ದಿದೆ. ಕೆಳಗೆ ಬಿದ್ದ ರಭಸಕ್ಕೆ ಮಣ್ಣಿನಿಂದ ನಿರ್ಮಿಸಲಾಗಿದ್ದ ಮೂರ್ತಿ ಭಗ್ನವಾಗಿದೆ.
ಭಕ್ತರ ಸಮ್ಮುಖದಲ್ಲೇ ಮೂರ್ತಿ ಕೈಯಿಂದ ಜಾರಿ ಬಿದ್ದ ದೃಶ್ಯ ಕಂಡು ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಉತ್ಸವದ ಮುಂದಿನ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಪ್ರತಿವರ್ಷದಂತೆ ಈ ಬಾರಿಯೂ ಭಕ್ತರ ಭಕ್ತಿಭಾವ ಹಾಗೂ ಸಂಭ್ರಮದೊಂದಿಗೆ ನಡೆದ ವಿಟ್ಲಪಿಂಡಿ ಉತ್ಸವದ ಅಂತಿಮ ಘಟ್ಟದಲ್ಲಿ ಸಂಭವಿಸಿದ ಈ ಅನಿರೀಕ್ಷಿತ ಘಟನೆ ಇದೀಗ ಗಮನ ಸೆಳೆದಿದೆ.