ಡೈಲಿವಾರ್ತೆ:09/ಸೆ./2026

ಗಣಪತಿ ಕೂರಿಸಲು ಅನುಮತಿ ಕೋರಿ ಠಾಣೆ ಮೆಟ್ಟಿಲೇರಿದ ಮಕ್ಕಳು: ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಸಿಪಿಐ

ಬಾಗಲಕೋಟೆ: ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆಯ ಅನುಮತಿ ಪಡೆಯಬೇಕು ಎಂಬ ನಿಯಮವನ್ನು ಪಾಲಿಸುವ ಮೂಲಕ ಮುಧೋಳ ತಾಲೂಕಿನ ಮಂಟೂರ ಗ್ರಾಮದ ಮೂವರು ಬಾಲಕರು ಗಮನ ಸೆಳೆದಿದ್ದಾರೆ.

ಮಂಟೂರ ಗ್ರಾಮದ ಮೂವರು ಬಾಲಕರು ಹಿರಿಯರೊಂದಿಗೆ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಗೆ ಆಗಮಿಸಿದ್ದರು. ಈ ವೇಳೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಕೈಯಲ್ಲಿ ಅರ್ಜಿ ಹಿಡಿದು ಸಿಪಿಐ ನಾಗರೆಡ್ಡಿ ಅವರನ್ನು ಭೇಟಿಯಾದರು.
ಗಣಪತಿ ಕೂರಿಸಲು ಅನುಮತಿ ಕೊಡಿ ಸಾರ್ ಎಂದು ಅಧಿಕಾರಿಗೆ ಮನವಿ ಮಾಡಿದ ಬಾಲಕರು, ಗಣೇಶೋತ್ಸವದ ಅಂಗವಾಗಿ ಕ್ವಿಜ್ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸುವುದಾಗಿ ತಿಳಿಸಿ ಅನುಮತಿ ಕೋರಿದ್ದಾರೆ.

ಮಕ್ಕಳ ನಡೆಗೆ ಮೆಚ್ಚಿದ ಸಿಪಿಐ:
ಮಕ್ಕಳ ಮುಗ್ಧತೆ ಹಾಗೂ ಕಾನೂನು ಪಾಲನೆಯ ಬದ್ಧತೆಗೆ ಮೆಚ್ಚಿದ ಸಿಪಿಐ ನಾಗರೆಡ್ಡಿ ಅವರು ಬಾಲಕರ ಬೆನ್ನು ತಟ್ಟಿ ಅರ್ಜಿಯನ್ನು ಸ್ವೀಕರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ಮಕ್ಕಳು ಸ್ವತಃ ಪೊಲೀಸ್ ಠಾಣೆಗೆ ಆಗಮಿಸಿರುವುದು ಗಮನ ಸೆಳೆಯಿತು. ಕಾನೂನಿನ ಬಗ್ಗೆ ಮಕ್ಕಳಿಗಿರುವ ಗೌರವ ಹಾಗೂ ಜನಸ್ನೇಹಿ ಪೊಲೀಸ್ ಅಭಿಯಾನದ ಮೂಲಕ ಪೊಲೀಸ್ ಠಾಣೆಗೆ ಬರಲು ಅವರು ತೋರಿದ ಧೈರ್ಯ ಹೆಮ್ಮೆಯ ವಿಚಾರ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ:
ಮಕ್ಕಳು ಪೊಲೀಸ್ ಅಧಿಕಾರಿಗೆ ಅರ್ಜಿ ಸಲ್ಲಿಸುತ್ತಿರುವ ಹಾಗೂ ಸಿಪಿಐ ಅವರು ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಣೇಶೋತ್ಸವ ಆಚರಣೆಗೆ ಅಗತ್ಯ ಅನುಮತಿ ಪಡೆಯಬೇಕು ಎಂಬ ನಿಯಮವನ್ನು ಬಾಲಕರೇ ಅರಿತುಕೊಂಡು ಅದನ್ನು ಪಾಲಿಸಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳ ಈ ಜವಾಬ್ದಾರಿಯುತ ನಡೆ ಕಾನೂನು ಪಾಲನೆಯ ಮಹತ್ವವನ್ನು ಸಾರುವ ಉತ್ತಮ ಉದಾಹರಣೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.