


ಡೈಲಿವಾರ್ತೆ:09/ಸೆ./2026

ಬೆಳ್ಳಂಬೆಳಗ್ಗೆ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ: ಡಾಲರ್ಸ್ ಕಾಲೋನಿಯಲ್ಲಿ ಅಧಿಕಾರಿಗಳಿಂದ ಶೋಧ:
ಅಬಕಾರಿ ಅಕ್ರಮ, ಬಾರ್ ಲೈಸೆನ್ಸ್ ವ್ಯವಹಾರ–ಹವಾಲಾ ಲಿಂಕ್ ಆರೋಪ; ಪ್ರಮುಖ ದಾಖಲೆಗಳಿಗಾಗಿ ತೀವ್ರ ಪರಿಶೀಲನೆ

ಬೆಂಗಳೂರು: ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬುಧವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಎರಡು ಪ್ರತ್ಯೇಕ ಕಾರುಗಳಲ್ಲಿ ಆಗಮಿಸಿದ ಇಡಿ ಅಧಿಕಾರಿಗಳ ತಂಡ ಸಚಿವರ ನಿವಾಸಕ್ಕೆ ಪ್ರವೇಶಿಸಿ, ಹಲವು ಪ್ರಮುಖ ದಾಖಲೆಗಳು ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸುತ್ತಿದೆ ಎನ್ನಲಾಗಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು, ಬಾರ್ ಲೈಸೆನ್ಸ್ ವಿತರಣೆ ಸಂಬಂಧಿತ ಭ್ರಷ್ಟಾಚಾರ ಹಾಗೂ ಹವಾಲಾ ಹಣಕಾಸು ವ್ಯವಹಾರಗಳ ಆರೋಪಗಳ ಹಿನ್ನೆಲೆಯಲ್ಲಿ ಈ ಶೋಧ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮನೆಯಲ್ಲಿರುವ ಆಸ್ತಿ ದಾಖಲೆಗಳು, ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ವಿವರಗಳು ಹಾಗೂ ಇತರ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು, ತನಿಖೆಗೆ ಅಗತ್ಯವೆನಿಸಿದ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಸಚಿವರ ನಿವಾಸದ ಸುತ್ತಮುತ್ತ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಮಂಜುನಾಥ್ ನಿವಾಸದ ಮೇಲಿನ ದಾಳಿ ಬೆನ್ನಲ್ಲೇ ಮಹತ್ವದ ಬೆಳವಣಿಗೆ:
ಕಳೆದ ಜೂನ್‌ನಲ್ಲಿ ಬೆಳಗಾವಿ ವಿಭಾಗದ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಸೇರಿದಂತೆ ಬೆಂಗಳೂರು, ಬೆಳಗಾವಿ, ಮೈಸೂರು ಹಾಗೂ ಅಥಣಿ ಸೇರಿದಂತೆ ಹಲವು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಸುದೀರ್ಘ ಶೋಧ ನಡೆಸಿದ್ದರು.
ಬಾರ್ ಲೈಸೆನ್ಸ್ ವಿತರಣೆ ವೇಳೆ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಡೆದಿದ್ದ ಆ ಕಾರ್ಯಾಚರಣೆಯಲ್ಲಿ ಮಂಜುನಾಥ್ ಅವರ ನಿವಾಸದಲ್ಲಿ ನೂರಾರು ಬಾರ್ ಲೈಸೆನ್ಸ್‌ಗಳಿಗೆ ಸಂಬಂಧಿಸಿದ ದಾಖಲೆಗಳು, ₹5.5 ಲಕ್ಷ ನಗದು ಹಾಗೂ ಸುಮಾರು ₹13.3 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು ಎಂದು ವರದಿಯಾಗಿತ್ತು.
ಮಂಜುನಾಥ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ಸಂಬಂಧಿ ಎನ್ನಲಾಗಿರುವ ಹಿನ್ನೆಲೆಯಲ್ಲಿ, ಇದೀಗ ಸಚಿವರ ನಿವಾಸದ ಮೇಲಿನ ಇಡಿ ಶೋಧ ರಾಜಕೀಯ ಹಾಗೂ ಆಡಳಿತಾತ್ಮಕ ವಲಯದಲ್ಲಿ ಕುತೂಹಲ ಮೂಡಿಸಿದೆ.
ಅಬಕಾರಿ ಇಲಾಖೆಯಲ್ಲಿನ ಅಕ್ರಮ ವ್ಯವಹಾರಗಳಿಗೆ ಸಂಬಂಧಿಸಿದ ಹಣಕಾಸು ವಹಿವಾಟುಗಳ ಕೊಂಡಿ ಎಲ್ಲಿಯವರೆಗೆ ಸಾಗುತ್ತದೆ ಎಂಬುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಇಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಆದರೆ, ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧದ ಆರೋಪಗಳು ತನಿಖೆಯ ಹಂತದಲ್ಲಿದ್ದು, ಇಡಿ ಶೋಧದ ಪೂರ್ಣ ವಿವರಗಳು ಹಾಗೂ ಅಧಿಕಾರಿಗಳ ಅಧಿಕೃತ ಹೇಳಿಕೆ ಇನ್ನಷ್ಟೇ ಹೊರಬರಬೇಕಿದೆ.