ಡೈಲಿವಾರ್ತೆ:08/ಸೆ./2026

ಅನಂತಾಡಿ : ಕಾಲುದಾರಿ ಬಂದ್, ಶೀಘ್ರ ತೆರವು ಗೊಳಿಸುವಂತೆ ತಹಶೀಲ್ದಾರ್ ಗೆ ಸ್ಥಳೀಯರ ಮನವಿ

ಬಂಟ್ವಾಳ : 150 ಕ್ಕೂ ಹೆಚ್ಚು ವರ್ಷಗಳಿಂದ ಬಳಸುತ್ತಿದ್ದ ಪ್ರಮುಖ ಕಾಲುದಾರಿಯನ್ನು ಬಂದ್ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದಲ್ಲಿ
ನಡೆದಿದೆ.

ಅನಂತಾಡಿ ಗ್ರಾಮದ ಸರ್ವೆ ನಂಬರ್ 137 ರಲ್ಲಿ ನಡುಮನೆ, ಸುದೆಕಟ್ಟೆಮಾರು ಹಾಗೂ ಪುಂಜಾವು ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಪರಿಸರದ ಸಾರ್ವಜನಿಕರು ಇಲ್ಲಿ ಹಾಕಲಾದ ತಡೆ ಬೇಲಿಯನ್ನು ತಕ್ಷಣವೇ ತೆರವುಗೊಳಿಸುವಂತೆ ಆಗ್ರಹಿಸಿ ಬಂಟ್ವಾಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಈ ಹಳೆಯ ಕಾಲುದಾರಿಯನ್ನೇ ನೆಚ್ಚಿಕೊಂಡಿದ್ದು, ದಾರಿ ಬಂದ್ ಆಗಿರುವುದರಿಂದ ಶಾಲೆ, ಅಂಗನವಾಡಿ, ಹಾಲಿನ ಡೈರಿ, ಅಂಚೆ ಕಚೇರಿ ಹಾಗೂ ಆಸ್ಪತ್ರೆಗೆ ತೆರಳುವ ಸಾರ್ವಜನಿಕರು ಮತ್ತು ವೃದ್ಧರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ವೃದ್ಧಾಪ್ಯ ವೇತನ ಮುಂತಾದ ಸೌಲಭ್ಯಗಳನ್ನು ಪಡೆಯಲು ಅಂಚೆ ಕಚೇರಿಗೆ ಹೋಗಲಾಗದೆ ಹಿರಿಯ ನಾಗರಿಕರು ಪರದಾಡುತ್ತಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಬಂದ್ ಆಗಿರುವ ಈ ಕಾಲುದಾರಿಯನ್ನು ತಕ್ಷಣವೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ತಹಶೀಲ್ದಾರರನ್ನು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಗ್ರಾಮ ಸಹಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ