


ಡೈಲಿವಾರ್ತೆ:10/ಸೆ./2026

ಬೆಳ್ತಂಗಡಿ: ಶಾಲಾ ಮೈದಾನದ ಬಳಿ ಗಾಂಜಾ, ಎಂಡಿಎಂಎ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ

ಬೆಳ್ತಂಗಡಿ: ಮಾದಕ ದ್ರವ್ಯ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ಗುರುವಾಯನಕೆರೆ ಸರ್ಕಾರಿ ಪ್ರೌಢಶಾಲಾ ಮೈದಾನದ ಸಮೀಪ ಇಬ್ಬರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದು, ಅವರಿಂದ ಎಂಡಿಎಂಎ ಹಾಗೂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕುವೆಟ್ಟು ಗ್ರಾಮದ ಸುನ್ನತ್ ಕೆರೆ ನಿವಾಸಿ ತ್ವಲಹ್ ಅಲಿಯಾಸ್ ಅಜ್ಜರ್ ಅಲಿಯಾಸ್ ಅನ್ಸಾರ್ (21) ಹಾಗೂ ಪಿಲಿಚಂಡಿಕಲ್ಲು ನಿವಾಸಿ ಇಬ್ರಾಹಿಂ (29) ಎಂದು ಗುರುತಿಸಲಾಗಿದೆ.
ಗುರುವಾಯನಕೆರೆಯ ಸರ್ಕಾರಿ ಪ್ರೌಢಶಾಲಾ ಮೈದಾನದ ಸಮೀಪದ ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶದಲ್ಲಿ ನಾಲ್ವರು ವ್ಯಕ್ತಿಗಳು ದ್ವಿಚಕ್ರ ವಾಹನಗಳ ಬಳಿ ನಿಂತಿರುವುದನ್ನು ಪೊಲೀಸರು ಗಮನಿಸಿದ್ದರು. ಪೊಲೀಸರನ್ನು ಕಂಡ ತಕ್ಷಣ ನಾಲ್ವರೂ ಪರಾರಿಯಾಗಲು ಯತ್ನಿಸಿದ್ದು, ಬೆನ್ನಟ್ಟಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ತ್ವಲಹ್ ಅಲಿಯಾಸ್ ಅನ್ಸಾರ್‌ನಿಂದ ಸುಮಾರು ₹5,000 ಮೌಲ್ಯದ ಎಂಡಿಎಂಎ ಹಾಗೂ ಇಬ್ರಾಹಿಂನಿಂದ 29 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿರುವ ಹಮ್ಜತ್ ಕರಾರ್ ಹಾಗೂ ನೌಶಾದ್‌ಗಾಗಿ ಬೆಳ್ತಂಗಡಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಾದಕ ದ್ರವ್ಯಗಳ ಮೂಲ ಹಾಗೂ ಮಾರಾಟ ಜಾಲದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.