ಡೈಲಿವಾರ್ತೆ:10/ಸೆ./2026

ಸುಣ್ಣಾರಿ ಎಕ್ಸಲೆಂಟ್ ಪಿಯು ಕಾಲೇಜಿನಲ್ಲಿ ‘ಸ್ವಚ್ಛ ಕ್ಯಾಂಪಸ್–ಹಸಿರು ಭವಿಷ್ಯ’ ಕಾರ್ಯಾಗಾರ: ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಮನೋಭಾವ ಬೆಳೆಸಿ: ಉದಯಕುಮಾರ್ ಶೆಟ್ಟಿ

ಕುಂದಾಪುರ, ಸೆ. 10: ಸ್ವಚ್ಛತೆ ಎಂದರೆ ಕೇವಲ ಕಸವನ್ನು ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡುವುದಲ್ಲ. ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡಿ, ಮೂಲದಲ್ಲಿಯೇ ವಿಂಗಡಿಸಿ, ಮರುಬಳಕೆ ಮಾಡುವ ಮೂಲಕ ಅದನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ನಿರಾಮಯ ಸೊಸೈಟಿ, ವಂಡ್ಸೆಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹೇಳಿದರು.

ಸುಣ್ಣಾರಿ ಎಕ್ಸಲೆಂಟ್ ಪಿಯು ಕಾಲೇಜು ಹಾಗೂ ಎಕ್ಸಲೆಂಟ್ ಇಂಡಿಯನ್ ಸ್ಕೂಲ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಸ್ವಚ್ಛ ಕ್ಯಾಂಪಸ್–ಹಸಿರು ಭವಿಷ್ಯ’ ಕಾರ್ಯಾಗಾರದಲ್ಲಿ ಸಸಿ ಪ್ರದರ್ಶನವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

ಪರಿಸರ ಸಂರಕ್ಷಣೆ ಇಲ್ಲದೆ ಸುಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ. ಮನೆ, ಶಾಲೆ ಹಾಗೂ ಸಮುದಾಯ ಮಟ್ಟದಲ್ಲಿ ಸಣ್ಣ ಬದಲಾವಣೆಗಳನ್ನು ಆರಂಭಿಸಿದರೆ ಅವು ದೊಡ್ಡ ಪರಿವರ್ತನೆಗೆ ಕಾರಣವಾಗುತ್ತವೆ. ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ, ಸಾವಯವ ತ್ಯಾಜ್ಯದಿಂದ ಕಾಂಪೋಸ್ಟ್, ಜೈವಿಕ ಅನಿಲ ಹಾಗೂ ಜೈವಿಕ ಗೊಬ್ಬರ ತಯಾರಿಸುವ ಮೂಲಕ ತ್ಯಾಜ್ಯವನ್ನೇ ಸಂಪನ್ಮೂಲವನ್ನಾಗಿ ಮಾಡಬಹುದು ಎಂದರು.

ತ್ಯಾಜ್ಯ ನಿರ್ವಹಣಾ ಕೇಂದ್ರಗಳು ಕೇವಲ ಕಸ ಸಂಗ್ರಹಿಸುವ ಸ್ಥಳಗಳಾಗದೆ, ತ್ಯಾಜ್ಯವನ್ನು ಮೌಲ್ಯಯುತ ಸಂಪನ್ಮೂಲವಾಗಿ ಪರಿವರ್ತಿಸುವ ಕೇಂದ್ರಗಳಾಗಬೇಕು. ಏಕಬಳಕೆ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ ‘ಕಡಿಮೆ ಬಳಕೆ–ಮರುಬಳಕೆ–ಮರುಸಂಸ್ಕರಣೆ’ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ತ್ಯಾಜ್ಯ ವಿಂಗಡಣೆ ಪರಿಸರ ಸಂರಕ್ಷಣೆಯ ಮೊದಲ ಹೆಜ್ಜೆ: ರಘುನಾಥ್

ಜಿಲ್ಲಾ ಪಂಚಾಯಿತಿ ಉಡುಪಿಯ ಜಿಲ್ಲಾ ಸಂಯೋಜಕ ರಘುನಾಥ್ ಮಾತನಾಡಿ, ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳದಲ್ಲಿಯೇ ಹಸಿ, ಒಣ, ಸ್ಯಾನಿಟರಿ ಹಾಗೂ ವಿಶೇಷ ತ್ಯಾಜ್ಯವನ್ನು ಪ್ರತ್ಯೇಕಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ತ್ಯಾಜ್ಯ ನಿರ್ವಹಣೆ ಸರ್ಕಾರ ಅಥವಾ ಸ್ಥಳೀಯಾಡಳಿತದ ಜವಾಬ್ದಾರಿ ಮಾತ್ರವಲ್ಲ; ‘ನನ್ನ ಕಸ–ನನ್ನ ಜವಾಬ್ದಾರಿ’ ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.

ಹಸಿ ತ್ಯಾಜ್ಯವನ್ನು ಸ್ಥಳೀಯ ಮಟ್ಟದಲ್ಲಿಯೇ ಕಾಂಪೋಸ್ಟ್ ಮಾಡಬಹುದು. ಪ್ಲಾಸ್ಟಿಕ್, ಕಾಗದ, ಲೋಹ ಸೇರಿದಂತೆ ಮರುಬಳಕೆ ಸಾಧ್ಯವಿರುವ ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸೂಕ್ತ ವ್ಯವಸ್ಥೆಗೆ ಹಸ್ತಾಂತರಿಸಬೇಕು. ಶಾಲಾ-ಕಾಲೇಜುಗಳಲ್ಲಿ ಡಸ್ಟ್‌ಬಿನ್‌ಗಳನ್ನು ಅಳವಡಿಸುವುದರ ಜೊತೆಗೆ ಯಾವ ತ್ಯಾಜ್ಯವನ್ನು ಎಲ್ಲಿಗೆ ಹಾಕಬೇಕು ಎಂಬ ಅರಿವನ್ನೂ ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು ಎಂದು ಹೇಳಿದರು.

ಸ್ವಚ್ಛ ಕ್ಯಾಂಪಸ್‌ನಿಂದ ಹಸಿರು ಭವಿಷ್ಯ: ಅಶೋಕ್ ಕಾಮತ್

DIET ಉಡುಪಿಯ ಪ್ರಾಂಶುಪಾಲ ಅಶೋಕ್ ಕಾಮತ್ ಮಾತನಾಡಿ, ‘Reduce, Reuse, Recycle’ ತತ್ವವನ್ನು ವಿದ್ಯಾರ್ಥಿ ಜೀವನದಿಂದಲೇ ಅಳವಡಿಸಿಕೊಳ್ಳಬೇಕು. ತ್ಯಾಜ್ಯ ನಿರ್ವಹಣೆಯೊಂದಿಗೆ ನೀರಿನ ಸಂರಕ್ಷಣೆ, ಶಕ್ತಿ ಉಳಿತಾಯ, ಸೌರಶಕ್ತಿ ಬಳಕೆ ಹಾಗೂ ಹಸಿರು ಪ್ರದೇಶಗಳ ವಿಸ್ತರಣೆಯತ್ತ ಶಿಕ್ಷಣ ಸಂಸ್ಥೆಗಳು ಗಮನಹರಿಸಬೇಕು ಎಂದರು.
ವಿವಿಧ ಜಾತಿಯ ಸ್ಥಳೀಯ ಸಸ್ಯಗಳನ್ನು ಬೆಳೆಸುವ ಮೂಲಕ ಜೈವ ವೈವಿಧ್ಯತೆಯನ್ನು ಸಂರಕ್ಷಿಸಬೇಕು. ವಿದ್ಯಾರ್ಥಿಗಳು ಪರಿಸರ ಸ್ನೇಹಿ ಅಭ್ಯಾಸಗಳನ್ನು ಮನೆ ಹಾಗೂ ಸಮಾಜಕ್ಕೂ ಕೊಂಡೊಯ್ಯುವ ಮೂಲಕ ಬದಲಾವಣೆಯ ಹರಿಕಾರರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಂ. ಹೆಗ್ಡೆ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ವಹಿಸಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ (DDPI) ಲೋಕೇಶ್ ಸಿ., ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಮಹೇಶ್ ಹಾಗೂ ಸರ್ವಂ ಟ್ರಸ್ಟ್ ಟೆಕ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಶರತ್ ಕುಮಾರ್, ಎಂ.ಎಂ. ಹೆಗ್ಡೆ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ದೀಪಾ ಎಂ. ಹೆಗ್ಡೆ, ಎಕ್ಸಲೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಶೆಟ್ಟಿ, ಎಕ್ಸಲೆಂಟ್ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ. ಆಚಾರ್ಯ ಹಾಗೂ ಇಂಡಿಯನ್ ಸ್ಕೂಲ್‌ನ ಸಿಬಿಎಸ್‌ಇ ವಿಭಾಗದ ಸಂಯೋಜಕಿ ವಿಶಾಲ ಶೆಟ್ಟಿ ಸೇರಿದಂತೆ ಶಿಕ್ಷಣ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕಿ ಅಕ್ಷತಾ ಕುಮಾರಿ ಅವರು ಗಣ್ಯರು, ಅತಿಥಿಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಉಪನ್ಯಾಸಕಿ ಶ್ರೀಮತಿ ಸುಜಾತಾ ನಿರೂಪಿಸಿದರು.
ಉಪನ್ಯಾಸಕಿ ಶ್ರೀಮತಿ ಸೌಜನ್ಯ ವಂದಿಸಿದರು.