


ಡೈಲಿವಾರ್ತೆ:10/ಸೆ./2026

ಹೊನ್ನಾವರ: ಮೀನುಗಾರಿಕೆಗೆ ತೆರಳಿದ್ದ ಯುವಕ ಸಮುದ್ರ ಪಾಲು: ಮೃತದೇಹ ಪತ್ತೆ

ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ಯುವಕನೋರ್ವ ಬಲವಾದ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಭಟ್ಕಳದ ರೋಶನ್ ಮೊಹಲ್ಲಾ ಕರಾವಳಿ ಪ್ರದೇಶದಲ್ಲಿ ದುರಂತ ಸಂಭವಿಸಿದೆ.
ಮೃತನನ್ನು ತನ್ಸಿಫ್ ಇಬ್ನ್ ರಿಯಾಜ್ ಹೊಡೆಕರ್ (19) ಎಂದು ಗುರುತಿಸಲಾಗಿದೆ.
ಬುಧವಾರ ಮಧ್ಯಾಹ್ನ ತನ್ಸಿಫ್ ತನ್ನ ಇಬ್ಬರು ಸಹಚರರೊಂದಿಗೆ ಅರೇಬಿಯನ್ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತನ್ಸಿಫ್ ಸಹಚರರಿಗಿಂತ ಮುಂದೆ ತೆರಳಿ ಬಲೆ ಬೀಸುತ್ತಿದ್ದಾಗ ಏಕಾಏಕಿ ಬಲವಾದ ಅಲೆ ಅಪ್ಪಳಿಸಿದ್ದು, ಅದರ ರಭಸಕ್ಕೆ ಸಮುದ್ರದ ನೀರಿನಲ್ಲಿ ಕೊಚ್ಚಿಹೋಗಿದ್ದರು ಎನ್ನಲಾಗಿದೆ.
ಘಟನೆ ಬಳಿಕ ತನ್ಸಿಫ್‌ಗಾಗಿ ತಕ್ಷಣವೇ ಶೋಧ ಕಾರ್ಯ ಆರಂಭಿಸಲಾಗಿದ್ದು, ಬುಧವಾರದಿಂದ ನಿರಂತರವಾಗಿ ಹುಡುಕಾಟ ನಡೆಸಲಾಗಿತ್ತು. ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಶೋಧ ನಡೆಸುತ್ತಿದ್ದ ವೇಳೆ ಸಮುದ್ರದಲ್ಲಿ ತನ್ಸಿಫ್ ಅವರ ಮೃತದೇಹ ಪತ್ತೆಯಾಗಿದೆ.
ಮಾಹಿತಿ ಪಡೆದ ಹೊನ್ನಾವರ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಹೊನ್ನಾವರ ಆಸ್ಪತ್ರೆಗೆ ಸಾಗಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಮೂವರು ಸಹೋದರರಲ್ಲಿ ತನ್ಸಿಫ್ ಎರಡನೆಯವರಾಗಿದ್ದು, ಹೊನ್ನಾವರದ ಐಟಿಐ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಓದಿನ ಜತೆಗೆ ಬಿಡುವಿನ ವೇಳೆಯಲ್ಲಿ ಮೀನುಗಾರಿಕೆಯನ್ನು ಹವ್ಯಾಸವಾಗಿ ಮಾಡುತ್ತಿದ್ದರು ಎನ್ನಲಾಗಿದೆ.
ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.