ಡೈಲಿವಾರ್ತೆ:11/ಸೆ./2026

80ರ ದಶಕದ AI ಫೋಟೋ ಕ್ರೇಜ್‌ಗೆ ಸೈಬರ್ ಬಲೆ? ವೈಯಕ್ತಿಕ ಚಿತ್ರಗಳ ಅಪ್‌ಲೋಡ್ ಮುನ್ನ ಎಚ್ಚರ!

ಬೆಂಗಳೂರು, ಸೆ.11: ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ವೈರಲ್ ಆಗಿರುವ ‘1980ರ ದಶಕದ AI ಫೋಟೋ ಟ್ರೆಂಡ್’ ಇದೀಗ ಸೈಬರ್ ಭದ್ರತೆಯ ಆತಂಕಕ್ಕೂ ಕಾರಣವಾಗಿದೆ. ಆಧುನಿಕ ಸೆಲ್ಫಿಗಳನ್ನು 80ರ ದಶಕದ ವಿಂಟೇಜ್ ಶೈಲಿಗೆ ಪರಿವರ್ತಿಸುವ ಕ್ರೇಜ್‌ನ ಹಿಂದೆ ವೈಯಕ್ತಿಕ ಮಾಹಿತಿ ಕಳವು ಹಾಗೂ ಚಿತ್ರಗಳ ದುರುಪಯೋಗದ ಅಪಾಯವಿದೆ ಎಂದು ಸೈಬರ್ ಭದ್ರತಾ ತಜ್ಞರು ಎಚ್ಚರಿಕೆ ನೀಡಿದ್ದಾರೆ.

AI ಆಧಾರಿತ ವಿವಿಧ ಆ್ಯಪ್‌ಗಳಿಗೆ ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಯುವಜನರು ಹಳೆಯ ಕ್ಯಾಮೆರಾ ಫಿಲ್ಮ್‌ನಲ್ಲಿ ಸೆರೆಹಿಡಿದ ಚಿತ್ರಗಳಂತೆ ಫೋಟೋಗಳನ್ನು ಸೃಷ್ಟಿಸುತ್ತಿದ್ದಾರೆ.

ಬೆಲ್‌ಬಾಟಮ್ ಪ್ಯಾಂಟ್, ವಿಂಟೇಜ್ ಉಡುಗೆ, ಹಳೆಯ ಕಾಲದ ಹಿನ್ನೆಲೆ ಸೇರಿದಂತೆ 1980ರ ದಶಕದ ಮಾದರಿಯಲ್ಲಿ ಫೋಟೋಗಳು ಮತ್ತು ಪೋಸ್ಟರ್‌ಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಆದರೆ, ಇಂತಹ ಟ್ರೆಂಡ್‌ಗಳ ಹಿಂದೆ ಬಳಕೆದಾರರ ವೈಯಕ್ತಿಕ ಛಾಯಾಚಿತ್ರಗಳು ಹಾಗೂ ಮುಖದ ಮಾಹಿತಿಯನ್ನು ಸಂಗ್ರಹಿಸುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

AI ಆ್ಯಪ್‌ಗಳಿಗೆ ಅಪ್‌ಲೋಡ್ ಮಾಡುವ ಮೂಲ ಚಿತ್ರಗಳು ಸುರಕ್ಷಿತವಾಗಿರುತ್ತವೆ ಎಂಬುದಕ್ಕೆ ಬಳಕೆದಾರರು ಖಚಿತತೆ ಇಲ್ಲದೆ ತಮ್ಮ ವೈಯಕ್ತಿಕ ಫೋಟೋಗಳನ್ನು ಹಂಚಿಕೊಳ್ಳುವುದು ಅಪಾಯಕಾರಿಯಾಗಬಹುದು ಎಂದು ಹೇಳಿದ್ದಾರೆ.

ಮುಖದ ಮಾಹಿತಿಯೇ ಅಪಾಯ:
ಬಳಕೆದಾರರ ಮುಖದ ಸ್ಪಷ್ಟ ಚಿತ್ರಗಳು ಸೈಬರ್ ಅಪರಾಧಿಗಳ ಕೈಗೆ ಸಿಕ್ಕಲ್ಲಿ ಅವುಗಳನ್ನು ವಿವಿಧ ರೀತಿಯ ದುರುಪಯೋಗಕ್ಕೆ ಬಳಸುವ ಸಾಧ್ಯತೆಯಿದೆ. ಮುಖದ ದತ್ತಾಂಶವನ್ನು ಆಧರಿಸಿ ನಕಲಿ ಚಿತ್ರಗಳು ಹಾಗೂ ಡೀಪ್‌ಫೇಕ್‌ಗಳನ್ನು ಸೃಷ್ಟಿಸುವ ಅಪಾಯವಿದ್ದು, ಮುಖ ಗುರುತಿಸುವಿಕೆ ಆಧಾರಿತ ತಂತ್ರಜ್ಞಾನಗಳ ದುರುಪಯೋಗಕ್ಕೂ ಇದು ದಾರಿ ಮಾಡಿಕೊಡಬಹುದು ಎಂದು ತಜ್ಞರು ತಿಳಿಸಿದ್ದಾರೆ.

ವಿಶೇಷವಾಗಿ ಯುವತಿಯರು ತಮ್ಮ ವೈಯಕ್ತಿಕ ಚಿತ್ರಗಳನ್ನು ಇಂತಹ AI ಆ್ಯಪ್‌ಗಳಿಗೆ ಅಪ್‌ಲೋಡ್ ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಎಂಬ ಕಾರಣಕ್ಕೆ ಯಾವುದೇ ಟ್ರೆಂಡ್‌ ಅನ್ನು ಪರಿಶೀಲನೆ ಇಲ್ಲದೆ ಅನುಸರಿಸಬಾರದು ಎಂದು ಸೂಚಿಸಿದ್ದಾರೆ.

ಡಾರ್ಕ್‌ವೆಬ್‌ನಲ್ಲೂ ದುರುಪಯೋಗದ ಆತಂಕ:
AI ಆ್ಯಪ್‌ಗಳ ಮೂಲಕ ಸಂಗ್ರಹವಾಗುವ ವೈಯಕ್ತಿಕ ಚಿತ್ರಗಳು ಹಾಗೂ ಸಂಬಂಧಿತ ಮಾಹಿತಿಗಳು ಸೈಬರ್ ಅಪರಾಧಿಗಳ ಕೈ ಸೇರಿ ವಿವಿಧ ಉದ್ದೇಶಗಳಿಗೆ ಬಳಕೆಯಾಗುವ ಸಾಧ್ಯತೆಯಿದೆ. ಇಂತಹ ಮಾಹಿತಿ ಡಾರ್ಕ್‌ವೆಬ್‌ನಲ್ಲಿ ಮಾರಾಟ ಅಥವಾ ವಿನಿಮಯವಾಗುವ ಅಪಾಯವೂ ಇರುವುದರಿಂದ ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿಯ ಸುರಕ್ಷತೆ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕೇವಲ ಮನರಂಜನೆಗಾಗಿ ಆರಂಭವಾಗುವ ವೈರಲ್ ಟ್ರೆಂಡ್‌ಗಳು ಕೆಲವೊಮ್ಮೆ ವೈಯಕ್ತಿಕ ದತ್ತಾಂಶವನ್ನು ಸೈಬರ್ ಅಪರಾಧಿಗಳಿಗೆ ಸುಲಭವಾಗಿ ಒದಗಿಸುವ ಮಾರ್ಗವಾಗಬಹುದು. ಹೀಗಾಗಿ AI ಆಧಾರಿತ ಫೋಟೋ ಎಡಿಟಿಂಗ್ ಆ್ಯಪ್‌ಗಳಿಗೆ ಮೂಲ ಛಾಯಾಚಿತ್ರಗಳನ್ನು ಅಪ್‌ಲೋಡ್ ಮಾಡುವ ಮುನ್ನ ಆ್ಯಪ್‌ನ ವಿಶ್ವಾಸಾರ್ಹತೆ, ಗೌಪ್ಯತಾ ನೀತಿ ಹಾಗೂ ಚಿತ್ರಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಪರಿಶೀಲಿಸುವುದು ಅಗತ್ಯ ಎಂದು ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.

ವೈರಲ್’ಗಿಂತ ವೈಯಕ್ತಿಕ ಸುರಕ್ಷತೆಯೇ ಮುಖ್ಯ:
ವೈರಲ್ ಟ್ರೆಂಡ್‌ನಲ್ಲಿ ಭಾಗವಹಿಸುವ ಉತ್ಸಾಹದಲ್ಲಿ ವೈಯಕ್ತಿಕ ಛಾಯಾಚಿತ್ರಗಳ ಸುರಕ್ಷತೆಯನ್ನು ಕಡೆಗಣಿಸಬಾರದು. ವಿಶೇಷವಾಗಿ ಮುಖ ಸ್ಪಷ್ಟವಾಗಿ ಕಾಣುವ ಖಾಸಗಿ ಚಿತ್ರಗಳನ್ನು ಅಪರಿಚಿತ ಅಥವಾ ವಿಶ್ವಾಸಾರ್ಹತೆ ಖಚಿತವಾಗದ AI ವೇದಿಕೆಗಳಿಗೆ ಅಪ್‌ಲೋಡ್ ಮಾಡುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ ಎಂದು ತಜ್ಞರು ಹೇಳಿದ್ದಾರೆ.

80ರ ದಶಕದ ವಿಂಟೇಜ್ ಲುಕ್ ಪಡೆಯುವ ಕೆಲವೇ ಕ್ಷಣಗಳ ಮನರಂಜನೆಗಾಗಿ ಭವಿಷ್ಯದಲ್ಲಿ ವೈಯಕ್ತಿಕ ಮಾಹಿತಿಯ ದುರುಪಯೋಗಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಎಚ್ಚರಿಕೆಯೊಂದಿಗೆ ಸೈಬರ್ ತಜ್ಞರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ.