


ಡೈಲಿವಾರ್ತೆ:12/ಸೆ./2026

ಬೆಂಗಳೂರಲ್ಲಿ ನಕಲಿ ಔಷಧ ದಂಧೆಯ ಕರಾಳ ಜಾಲ ಬಯಲು: 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆ ಆರೋಪ, ಕೃಪಾ ಹೆಲ್ತ್‌ಕೇರ್ ಮಾಲೀಕನ ಬಂಧನ!

ಬೆಂಗಳೂರು, ಸೆ.12: ರಾಜಧಾನಿ ಬೆಂಗಳೂರಿನಲ್ಲಿ ನಕಲಿ ಔಷಧಿಗಳ ದಂಧೆಯ ಮತ್ತೊಂದು ಆತಂಕಕಾರಿ ಜಾಲ ಬೆಳಕಿಗೆ ಬಂದಿದ್ದು, ಮಿನರ್ವ್ ಸರ್ಕಲ್‌ನಲ್ಲಿರುವ ‘ಕೃಪಾ ಹೆಲ್ತ್‌ಕೇರ್’ ಕಚೇರಿ ಹಾಗೂ ಗೋಡೌನ್ ಮೇಲೆ ವಿಶೇಷ ತನಿಖಾ ತಂಡ (SIT) ಮತ್ತು ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿದೆ. ದಾಳಿ ವೇಳೆ ಭಾರಿ ಪ್ರಮಾಣದ ನಕಲಿ ಔಷಧಿಗಳು, ನಕಲಿ ಬಿಲ್‌ಗಳು, ಲೇಬಲ್‌ಗಳು ಹಾಗೂ ವಿತರಣೆಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮಾಲೀಕ ವೀರೇಶ್‌ಕುಮಾರ್‌ನನ್ನು ಬಂಧಿಸಲಾಗಿದೆ.
ಕೃಪಾ ಹೆಲ್ತ್‌ಕೇರ್ ಮೂಲಕ ಬೆಂಗಳೂರಿನ 90ಕ್ಕೂ ಹೆಚ್ಚು ಆಸ್ಪತ್ರೆಗಳು, ಕ್ಲಿನಿಕ್‌ಗಳು ಹಾಗೂ ಮೆಡಿಕಲ್ ಶಾಪ್‌ಗಳಿಗೆ ನಕಲಿ ಔಷಧಿಗಳನ್ನು ಪೂರೈಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದ್ದು, ಈ ಜಾಲದಲ್ಲಿ ಜೀವ ರಕ್ಷಕ ಔಷಧಿಗಳು, ಕ್ಯಾನ್ಸರ್ ಮಾತ್ರೆಗಳು ಹಾಗೂ ಐಸಿಯುನಲ್ಲಿ ಬಳಸುವ ಇಂಜೆಕ್ಷನ್‌ಗಳೂ ಸೇರಿವೆ ಎನ್ನಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತನಿಖಾ ತಂಡ, ಔಷಧಿಗಳ ಪೂರೈಕೆ ಪಡೆದಿರುವ ಸಂಸ್ಥೆಗಳ ವಿವರಗಳನ್ನು ಕಲೆಹಾಕುತ್ತಿದೆ.
ರಾಮನಗರ ದಾಳಿಯಿಂದ ಜಾಲದ ಸುಳಿವು:
ಕಳೆದ ಆಗಸ್ಟ್ 18ರಂದು ರಾಮನಗರ ಜಿಲ್ಲೆಯ ಬಿಡದಿ ಹಾಗೂ ದೊಡ್ಡೇರಿ ಭಾಗದಲ್ಲಿರುವ ಫಾರ್ಮ್‌ಹೌಸ್‌ವೊಂದರ ಮೇಲೆ ನಡೆದ ದಾಳಿ ವೇಳೆ ಈ ನಕಲಿ ಔಷಧ ಜಾಲದ ಸುಳಿವು ಸಿಕ್ಕಿತ್ತು. ಕಾರ್ಯಾಚರಣೆಯಲ್ಲಿ ಸುಮಾರು ₹5 ಕೋಟಿ ಮೌಲ್ಯದ ನಕಲಿ ಔಷಧಿಗಳು, ನಕಲಿ ಬಿಲ್‌ಗಳು, ಇಂಜೆಕ್ಷನ್ ತುಂಬುವ ಯಂತ್ರಗಳು ಹಾಗೂ ನಕಲಿ ಲೇಬಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜಾಲವು ರಾಜ್ಯದ ಗಡಿ ದಾಟಿ ವಿಸ್ತರಿಸಿರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆಯನ್ನು ಮತ್ತಷ್ಟು ವಿಸ್ತರಿಸಲಾಗಿತ್ತು.
ಆರು ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ:
ಜಂಟಿ ಪೊಲೀಸ್ ಆಯುಕ್ತ ಸಿ. ವಂಶಿಕೃಷ್ಣ ಅವರ ನೇತೃತ್ವದಲ್ಲಿ SIT ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಕರ್ನಾಟಕ, ಹರಿಯಾಣ, ಹಿಮಾಚಲ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಆರು ರಾಜ್ಯಗಳ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಶುಕ್ರವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಇದರ ಭಾಗವಾಗಿ ಬೆಂಗಳೂರಿನ ಮಿನರ್ವ್ ಸರ್ಕಲ್‌ನಲ್ಲಿರುವ ಕೃಪಾ ಹೆಲ್ತ್‌ಕೇರ್ ಕಚೇರಿ ಮತ್ತು ಗೋಡೌನ್ ಹಾಗೂ ವೀರೇಶ್‌ಕುಮಾರ್ ಅವರ ಮನೆ ಮೇಲೂ ತಪಾಸಣೆ ನಡೆಸಲಾಗಿದೆ.
ಪಾಲುದಾರಿಕೆ ಹಿನ್ನೆಲೆ ಬಂಧನ:
2021ರಲ್ಲಿ ಕೃಪಾ ಹೆಲ್ತ್‌ಕೇರ್ ಸಂಸ್ಥೆ ಆರಂಭಿಸಿದ್ದ ವೀರೇಶ್‌ಕುಮಾರ್, ನಕಲಿ ಔಷಧ ಜಾಲದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಪ್ರಶಾಂತ್ ಹಾಗೂ ಆತನ ಸಹಚರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಒಂದು ವರ್ಷದಿಂದ ವೀರೇಶ್‌ಕುಮಾರ್ ಮತ್ತು ಪ್ರಶಾಂತ್ ಉದ್ಯಮದ ಪಾಲುದಾರರಾಗಿದ್ದರು ಎಂಬ ಮಾಹಿತಿಯ ಆಧಾರದ ಮೇಲೆ ತನಿಖೆ ಮುಂದುವರಿದಿತ್ತು. ಇದರ ಬೆನ್ನಲ್ಲೇ ವೀರೇಶ್‌ಕುಮಾರ್‌ನನ್ನು ಬಂಧಿಸಲಾಗಿದೆ.
ಅವಧಿ ಮೀರಿದ ಔಷಧಿಗೂ ಹೊಸ ಪ್ಯಾಕಿಂಗ್?
ತನಿಖೆಯ ಪ್ರಕಾರ, ಕಡಿಮೆ ಬೆಲೆಯ ರೀ-ಬ್ರ್ಯಾಂಡಿಂಗ್ ಔಷಧಿಗಳನ್ನು ಖರೀದಿಸಿ ಬೇರೆ ಹೆಸರಿನಲ್ಲಿ ಮಾರಾಟ ಮಾಡುವುದು, ಅವಧಿ ಮೀರಿದ ಔಷಧಿಗಳನ್ನು ಸಂಗ್ರಹಿಸಿ ಹೊಸ ಬಾಟಲಿಗಳಿಗೆ ತುಂಬುವುದು ಹಾಗೂ ನಕಲಿ ಲೇಬಲ್ ಮತ್ತು ಪ್ಯಾಕಿಂಗ್ ಸಾಮಗ್ರಿಗಳ ಮೂಲಕ ಮರುಪ್ಯಾಕ್ ಮಾಡುವುದು ದಂಧೆಯ ಪ್ರಮುಖ ವಿಧಾನವಾಗಿತ್ತು ಎನ್ನಲಾಗಿದೆ.
ಪ್ರತಿಷ್ಠಿತ ಔಷಧ ಕಂಪನಿಗಳ ಹೆಸರನ್ನೂ ದುರ್ಬಳಕೆ ಮಾಡಿಕೊಂಡು ನಕಲಿ ಲೇಬಲ್ ಅಂಟಿಸಲಾಗುತ್ತಿತ್ತು ಎಂಬ ಆರೋಪವಿದೆ. ಮಿನರ್ವ್ ಸರ್ಕಲ್‌ನ ಗೋಡೌನ್‌ಗೆ ಬರುತ್ತಿದ್ದ ಇಂತಹ ಔಷಧಿಗಳನ್ನು ಅಲ್ಲಿಂದ ಬೆಂಗಳೂರು ಸುತ್ತಮುತ್ತಲಿನ ಆಸ್ಪತ್ರೆಗಳು, ಕ್ಲಿನಿಕ್‌ಗಳು ಹಾಗೂ ಮೆಡಿಕಲ್ ಶಾಪ್‌ಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಶೇ.50ರಷ್ಟು ರಿಯಾಯಿತಿಯಲ್ಲಿ ಪೂರೈಕೆ?
ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಿಗೆ ನಕಲಿ ಔಷಧಿಗಳನ್ನು ಸಾಮಾನ್ಯ ದರಕ್ಕಿಂತ ಸುಮಾರು ಶೇ.50ರಷ್ಟು ರಿಯಾಯಿತಿಯಲ್ಲಿ ನೀಡಲಾಗುತ್ತಿತ್ತು ಎನ್ನಲಾಗಿದೆ. ಔಷಧಿಗಳ ಮಾರಾಟ ಮತ್ತು ವಿತರಣೆಗೆ 15ಕ್ಕೂ ಹೆಚ್ಚು ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳ ಪ್ರತ್ಯೇಕ ತಂಡ ಕಾರ್ಯನಿರ್ವಹಿಸುತ್ತಿತ್ತು ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ.
ಈ ಜಾಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ಮಹಾರಾಷ್ಟ್ರ ಮತ್ತು ಗುಜರಾತ್ ಸೇರಿದಂತೆ ಇತರ ರಾಜ್ಯಗಳಿಗೂ ವಿಸ್ತರಿಸಿರುವ ಸಾಧ್ಯತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಬ್ಯಾಚ್ ಸಂಖ್ಯೆಗಳ ಪರಿಶೀಲನೆ
ದಾಳಿ ವೇಳೆ ವಶಪಡಿಸಿಕೊಂಡಿರುವ ಔಷಧಿಗಳ ಬ್ಯಾಚ್ ಸಂಖ್ಯೆಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಔಷಧಿಗಳ ನೈಜತೆ, ರಾಸಾಯನಿಕ ಸಂಯೋಜನೆ ಹಾಗೂ ಗುಣಮಟ್ಟ ಪರಿಶೀಲಿಸಲು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ನಕಲಿ ಎಂದು ಶಂಕಿಸಲಾಗಿರುವ ಔಷಧಿಗಳ ಬ್ಯಾಚ್ ಸಂಖ್ಯೆಗಳನ್ನು ಕರ್ನಾಟಕ FDA ಪೋರ್ಟಲ್‌ನಲ್ಲಿ ಬ್ಲಾಕ್ ಮಾಡಲಾಗಿದ್ದು, ಅವುಗಳ ಮಾರಾಟ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಯಾವೆಲ್ಲ ಆಸ್ಪತ್ರೆಗಳು, ಕ್ಲಿನಿಕ್‌ಗಳು ಮತ್ತು ಮೆಡಿಕಲ್ ಶಾಪ್‌ಗಳಿಗೆ ಈ ಔಷಧಿಗಳು ತಲುಪಿವೆ ಎಂಬುದನ್ನು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ.
ಕಿಂಗ್‌ಪಿನ್ ಪ್ರಶಾಂತ್‌ಗಾಗಿ ಬೇಟೆ:
ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಪ್ರಶಾಂತ್ ಸದ್ಯ ತಲೆಮರೆಸಿಕೊಂಡಿದ್ದು, ಆತನಿಗಾಗಿ ತನಿಖಾ ತಂಡ ಶೋಧ ನಡೆಸುತ್ತಿದೆ. ಪ್ರಶಾಂತ್ ಬಂಧನವಾದ ಬಳಿಕ ನಕಲಿ ಔಷಧ ಜಾಲದ ಸಂಪೂರ್ಣ ಕಾರ್ಯವೈಖರಿ, ಹಣಕಾಸಿನ ವ್ಯವಹಾರಗಳು ಹಾಗೂ ರಾಜ್ಯದ ವಿವಿಧ ಭಾಗಗಳಿಗೆ ನಡೆದಿರುವ ಪೂರೈಕೆಯ ಕುರಿತು ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ.
ಜೀವ ರಕ್ಷಕ ಔಷಧಿಗಳೇ ನಕಲಿ ಎಂಬ ಆರೋಪ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದ್ದು, ಸಾರ್ವಜನಿಕರ ಆರೋಗ್ಯ ಮತ್ತು ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳು ಪ್ರಕರಣದ ಪ್ರತಿಯೊಂದು ಹಂತವನ್ನೂ ಪರಿಶೀಲಿಸುತ್ತಿವೆ.