ಡೈಲಿವಾರ್ತೆ:12/ಸೆ./2026

ಮಣಿಪಾಲ: ಸರ್ಕಾರಿ ಜಮೀನಿನಲ್ಲಿ ಸ್ಫೋಟಕ ಬಳಸಿ ಬಂಡೆ ಸ್ಫೋಟ ಪ್ರಕರಣ – ಇಬ್ಬರ ಬಂಧನ!

ಉಡುಪಿ: ಸರ್ಕಾರಿ ಜಮೀನಿನಲ್ಲಿ ಯಾವುದೇ ಅನುಮತಿ ಪಡೆಯದೆ ಸ್ಫೋಟಕ ಬಳಸಿ ಬಂಡೆ ಕಲ್ಲುಗಳನ್ನು ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ತೋಡಿಕರ್ಮಾರ್ ನಿವಾಸಿ ಕೆ. ಗೋವಿಂದ ರಾಜ್ (40) ಹಾಗೂ ವಿಜಯಪುರ ಮೂಲದ, ಕಲ್ಯಾ ಹಾಳೆಕಟ್ಟೆ ನಿವಾಸಿ ಶೇಖಪ್ಪ ಚಲವಾದಿ (28) ಎಂದು ಗುರುತಿಸಲಾಗಿದೆ.

ಉಡುಪಿ ತಾಲೂಕು ಮರ್ಣೆ ಗ್ರಾಮದ ಕುಕ್ಕಿಪಲ್ಕೆ ಪ್ರದೇಶದಲ್ಲಿರುವ ಸರ್ವೆ ನಂ.112/2ರ 1.54 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನಿನಲ್ಲಿ ಸೆ.5ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮರ್ಣೆ ಗ್ರಾಮದ ಜೆರಾಲ್ಡ್ ನೊರೋಹ್ನ (42) ಅವರು ನೀಡಿದ ದೂರಿನಂತೆ, ಜಮೀನಿನಲ್ಲಿ ಬಂಡೆ ಕಲ್ಲುಗಳನ್ನು ತೆರವುಗೊಳಿಸುವ ಉದ್ದೇಶದಿಂದ ಆರೋಪಿತರಾದ ರೋಜಿನಾ ರೋಡ್ರಿಗಸ್ ಹಾಗೂ ಅವರ ಪರವಾಗಿ ಅಧಿಕಾರ ಪತ್ರ ಹೊಂದಿರುವ ರಿಚಾರ್ಡ್ ಪೌಲ್ ಫೆರಾವೋ ಅವರು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಅಥವಾ ಪರವಾನಗಿ ಪಡೆಯದೆ ಸ್ಫೋಟಕ ವಸ್ತುಗಳನ್ನು ಬಳಸಿ ಬಂಡೆಗಳನ್ನು ಸ್ಫೋಟಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 150/2026ರಂತೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಸ್ಫೋಟಕ ಬಳಕೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರ ಅಂಶಗಳ ಕುರಿತು ವಿಚಾರಣೆ ನಡೆಸಿ ಕೆ. ಗೋವಿಂದ ರಾಜ್ ಮತ್ತು ಶೇಖಪ್ಪ ಚಲವಾದಿಯನ್ನು ಬಂಧಿಸಿದ್ದಾರೆ.

ಘಟನೆಗೆ ಬಳಸಲಾಗಿದೆ ಎನ್ನಲಾದ ಟ್ರ್ಯಾಕ್ಟರ್, ಡ್ರಿಲ್ಲಿಂಗ್ ಯಂತ್ರ ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಮಣಿಪಾಲ ಪೊಲೀಸ್ ಠಾಣೆಯ ಪಿಎಸ್‌ಐ ತಿಮ್ಮೇಶ್ ಬಿ.ಎನ್. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.