


ಡೈಲಿವಾರ್ತೆ:13/ಸೆ./2026

ಟಿ. ನರಸೀಪುರದಲ್ಲಿ ಗಣೇಶೋತ್ಸವಕ್ಕೆ ರಾಜಕೀಯ ಬಿಸಿ:
ಇನ್ಸ್‌ಪೆಕ್ಟರ್ ಎಚ್ಚರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ – ಪ್ರತಾಪ್ ಸಿಂಹ ಬಂಧನಕ್ಕೆ ದಲಿತ ಸಂಘಟನೆಗಳ ಆಗ್ರಹ!

ಮೈಸೂರು, ಸೆ.13: ಗಣೇಶ ಪ್ರತಿಷ್ಠಾಪನೆ ಹಾಗೂ ಮೆರವಣಿಗೆಗೆ ಸಂಬಂಧಿಸಿದಂತೆ ಟಿ. ನರಸೀಪುರದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ನೀಡಿದ ಎಚ್ಚರಿಕೆ ಇದೀಗ ರಾಜಕೀಯ ವಿವಾದಕ್ಕೆ ತಿರುಗಿದ್ದು, ಪಟ್ಟಣದಲ್ಲಿ ಪ್ರತಿಭಟನೆಗಳ ಮೂಲಕ ತೀವ್ರ ಹೈಡ್ರಾಮಾ ಸೃಷ್ಟಿಯಾಗಿದೆ.
ಗಣೇಶೋತ್ಸವದ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಇನ್ಸ್‌ಪೆಕ್ಟರ್ ಹಿಂದೂ ಕಾರ್ಯಕರ್ತರಿಗೆ ಧಮ್ಕಿ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಇನ್ಸ್‌ಪೆಕ್ಟರ್ ವಿರುದ್ಧ ಪ್ರತಿಭಟನೆ ನಡೆಸಿದರು. ಗಣೇಶೋತ್ಸವ ಆಚರಣೆಗೆ ಪೊಲೀಸರು ಅನಗತ್ಯ ನಿರ್ಬಂಧ ಹೇರುತ್ತಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಇದರ ಬೆನ್ನಲ್ಲೇ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ಖಂಡಿಸಿ ದಲಿತಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಾಪ್ ಸಿಂಹ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಎರಡೂ ಬೆಳವಣಿಗೆಗಳಿಂದಾಗಿ ಟಿ. ನರಸೀಪುರದಲ್ಲಿ ರಾಜಕೀಯ ವಾತಾವರಣ ಮತ್ತಷ್ಟು ಬಿಗಡಾಯಿಸಿತು.
ಹೊಸ ನಿಯಮ ಜಾರಿಯಿಲ್ಲ – ಎಸ್‌ಪಿ:
ಈ ನಡುವೆ ವಿವಾದಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಪಷ್ಟನೆ ನೀಡಿದ್ದು, ಈ ಬಾರಿಯ ಗಣೇಶೋತ್ಸವಕ್ಕೆ ಯಾವುದೇ ಹೊಸ ನಿಯಮಗಳನ್ನು ಜಾರಿಗೊಳಿಸಿಲ್ಲ ಎಂದು ತಿಳಿಸಿದ್ದಾರೆ.
ಶಾಂತಿ ಸಭೆಯಲ್ಲಿ ಇನ್ಸ್‌ಪೆಕ್ಟರ್ ಮಾತನಾಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಗಣೇಶ ಮಂಡಳಿಗಳು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ಮೆರವಣಿಗೆ ಮಾರ್ಗಗಳು ಹಾಗೂ ನಿಯಮಗಳನ್ನೇ ಈ ಬಾರಿಯೂ ಪಾಲಿಸಬಹುದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷದ ಘಟನೆಯೊಂದನ್ನು ಉಲ್ಲೇಖಿಸಿ ಇನ್ಸ್‌ಪೆಕ್ಟರ್ ಮುನ್ನೆಚ್ಚರಿಕೆ ನೀಡಿದ್ದರು. ಆದರೆ, ಗಣೇಶೋತ್ಸವ ಅಥವಾ ಮೆರವಣಿಗೆಗೆ ಯಾವುದೇ ಹೊಸ ನಿರ್ಬಂಧ ವಿಧಿಸಿಲ್ಲ. ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದಲೇ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿಸಿದ್ದರು ಎಂದು ಎಸ್‌ಪಿ ಹೇಳಿದ್ದಾರೆ.
ಪೊಲೀಸರ ಸ್ಪಷ್ಟನೆಯ ಬಳಿಕವೂ ಟಿ. ನರಸೀಪುರದಲ್ಲಿ ಗಣೇಶೋತ್ಸವ ವಿಚಾರ ರಾಜಕೀಯ ತಿರುವು ಪಡೆದುಕೊಂಡಿರುವುದು ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ.