ಡೈಲಿವಾರ್ತೆ:15/ಸೆ./2026

ಸಾಸ್ತಾನ: ಸರ್ವಧರ್ಮೀಯರ ಸಂಗಮವಾದ ಹದ್ದಿನಬೆಟ್ಟು ಗಣೇಶೋತ್ಸವ: ಪದ್ಮಶ್ರೀ ಹರೆಕಳ ಹಾಜಬ್ಬರಿಗೆ ಶ್ರೀಗಣೇಶ ಆರಾಧನೋತ್ಸವ ಪ್ರಶಸ್ತಿ ಪ್ರದಾನ – ಸೇವೆ ಭಗವಂತನಿಚ್ಛೆ, ನಾನು ಕೇವಲ ಮಧ್ಯವರ್ತಿ: ಅವಿನಾಶ್ ಶೆಟ್ಟಿ

ಕೋಟ: ಸಮಾಜ ಸೇವೆ ಮಾಡುವ ಕಾಯಕ ಭಗವಂತನ ಇಚ್ಛೆ. ಸಮಾಜಕ್ಕೆ ನೀಡುವ ಪ್ರತಿಯೊಂದು ಕೊಡುಗೆಯೂ ಭಗವಂತನಿಂದಲೇ ದೊರೆತಿದ್ದು, ತಾನು ಕೇವಲ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹದ್ದಿನಬೆಟ್ಟು ಸಾಮೂಹಿಕ ಶ್ರೀ ಗಣೇಶ ಆರಾಧನೋತ್ಸವ ಸಮಿತಿ ಅಧ್ಯಕ್ಷ ಅವಿನಾಶ್ ಶೆಟ್ಟಿ ಗುಂಡ್ಮಿ ಹೇಳಿದರು.

ಸೋಮವಾರ ಹದ್ದಿನಬೆಟ್ಟು ಸಾಮೂಹಿಕ ಶ್ರೀ ಗಣೇಶ ಆರಾಧನೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 29ನೇ ವರ್ಷದ ಶ್ರೀ ಗಣೇಶ ಆರಾಧನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಫೌಂಡೇಶನ್ ವತಿಯಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರೊಂದಿಗೆ ವಿವಿಧ ಸಾಮಾಜಿಕ ಕಾರ್ಯಗಳನ್ನೂ ನಡೆಸಲಾಗುತ್ತಿದೆ. ಇಂದು ಹದ್ದಿನಬೆಟ್ಟುವಿನ ಗಣೇಶೋತ್ಸವವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರು ಒಗ್ಗೂಡುವ ಸೌಹಾರ್ದದ ವೇದಿಕೆಯಾಗಿ ಬೆಳೆದಿದೆ. ಉತ್ಸವದ ಸಿದ್ಧತೆಯಿಂದ ಹಿಡಿದು ಕಾರ್ಯಕ್ರಮದವರೆಗೆ ಎಲ್ಲರೂ ಭೇದಭಾವವಿಲ್ಲದೆ ಕೈಜೋಡಿಸುತ್ತಿರುವುದು ಇದರ ವಿಶೇಷತೆ ಎಂದು ಅವಿನಾಶ್ ಶೆಟ್ಟಿ ಹೇಳಿದರು.

ಇದೇ ವೇಳೆ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೆಕಳ ಹಾಜಬ್ಬರಿಗೆ ₹50 ಸಾವಿರ ನಗದು ಪುರಸ್ಕಾರದೊಂದಿಗೆ ‘ಶ್ರೀ ಗಣೇಶ ಆರಾಧನೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹರೆಕಳ ಹಾಜಬ್ಬ, ತಮ್ಮೂರಿನ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕಿತ್ತಳೆ ಮಾರಾಟ ಮಾಡಿ ಶಾಲೆ ಕಟ್ಟಿದ್ದೇನೆ. ಆಗಿನ ಶಾಸಕ ಯು.ಟಿ. ಫರೀದ್ ಸೇರಿದಂತೆ ಅನೇಕರು ಕೈಜೋಡಿಸಿದ್ದರು. ಇಂತಹ ಪ್ರಶಸ್ತಿಗಳು ಶೈಕ್ಷಣಿಕ ಸೇವೆಗೆ ಇನ್ನಷ್ಟು ವೇಗ ನೀಡಲು ಪ್ರೇರಣೆ ನೀಡುತ್ತವೆ ಎಂದರು.

ಇದೇ ಸಂದರ್ಭದಲ್ಲಿ ಯುವ ಕಲಾವಿದ ನಿರಜ್ ಅವರು ಹರೆಕಳ ಹಾಜಬ್ಬರ ಭಾವಚಿತ್ರವನ್ನು ರಚಿಸಿ ಅವರಿಗೆ ಹಸ್ತಾಂತರಿಸಿದರು.

ಹಿಂದೂ,ಮುಸ್ಲಿಂ,ಕ್ರೈಸ್ತರ ಒಗ್ಗೂಡುವಿಕೆಯೇ ಸಾರ್ವಜನಿಕ ಗಣೇಶೋತ್ಸವದ ಆಶಯ: ದಿನೇಶ್ ಹೆಗ್ಡೆ:

ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಲೋಕಮಾನ್ಯ ಬಾಲಗಂಗಾಧರ ತಿಲಕರು ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ್ದರು. ಅದೇ ಆಶಯದಲ್ಲಿ ಹದ್ದಿನಬೆಟ್ಟುವಿನ ಗಣೇಶೋತ್ಸವದ ಒಂದೇ ವೇದಿಕೆಯಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರು ಒಗ್ಗೂಡಿ ಭಾಗವಹಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಹರೆಕಳ ಹಾಜಬ್ಬರ ಜೀವನವೇ ಸಾಕ್ಷಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ಪ್ರಾಂಶುಪಾಲ ಡಾ. ರಾಬರ್ಟ್ ರೋಡ್ರಿಗಸ್ ಮಾತನಾಡಿ, ಗಣೇಶೋತ್ಸವವು ಧಾರ್ಮಿಕ ಆಚರಣೆಯ ಜತೆಗೆ ಸಾಮಾಜಿಕ ಒಗ್ಗಟ್ಟು, ಮಾನವೀಯತೆ ಹಾಗೂ ಸೌಹಾರ್ದದ ಸಂದೇಶ ಸಾರುವ ವೇದಿಕೆಯಾಗಬೇಕು. ಕಳೆದ 29 ವರ್ಷಗಳಿಂದ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸಮಿತಿಯ ಸೇವೆ ಶ್ಲಾಘನೀಯ ಎಂದರು.

ಖ್ಯಾತ ರಥಶಿಲ್ಪಿ ಕೋಟೇಶ್ವರ ರಾಜಗೋಪಾಲ್ ಆಚಾರ್ಯ ಮಾತನಾಡಿ, ಹರೆಕಳ ಹಾಜಬ್ಬರ ಸರಳತೆ, ಸಜ್ಜನಿಕೆ ಹಾಗೂ ಎಲ್ಲರಿಗೂ ಗೌರವ ನೀಡುವ ಗುಣ ಮಾದರಿಯಾಗಿದೆ. ಮಣ್ಣಿನ ಗಣಪತಿಯ ಆರಾಧನೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಮಹತ್ವ ಹೊಂದಿದ್ದು, ಗಣಪತಿ ಆರಾಧನೆಯು ಜನರನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ ಎಂದರು.

ಸಾನ್ವಿ ಗ್ರೂಪ್ ಅವಿನಾಶ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯಕ್ರಮದ ಅಂಗವಾಗಿ ಬ್ರಹ್ಮಾವರ ತಾಲೂಕಿನ 30 ವಿದ್ಯಾರ್ಥಿಗಳಿಗೆ ತಲಾ ₹5 ಸಾವಿರ ವಿದ್ಯಾರ್ಥಿವೇತನ ವಿತರಿಸಲಾಯಿತು. ಎರಡು ಸ್ಥಳೀಯ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಒಂದು ವರ್ಷದ ಮಾಸಿಕ ಗೌರವಧನ ಹಾಗೂ ಆರು ಮಂದಿ ಅನಾರೋಗ್ಯ ಪೀಡಿತರಿಗೆ ಸಹಾಯಧನ ನೀಡಲಾಯಿತು. ಉತ್ಸವದ ಅಂಗವಾಗಿ ನಡೆದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಮಿತಿ ಕಾರ್ಯದರ್ಶಿ ಚಂದ್ರ ಮೊಗವೀರ ಸ್ವಾಗತಿಸಿ, ಬಹುಮಾನ ಪತ್ರ ವಾಚಿಸಿ ವಂದಿಸಿದರು. ಸೂರಜ್ ವಿದ್ಯಾರ್ಥಿವೇತನ ಫಲಾನುಭವಿಗಳ ಪಟ್ಟಿ ವಾಚಿಸಿದರು. ಅಶೋಕ್ ಭಂಡಾರಿ ಲೆಕ್ಕಪತ್ರ ಮಂಡಿಸಿದರು. ಗೌರವಾಧ್ಯಕ್ಷ ರಾಮದೇವ ಐತಾಳ್ ಪ್ರಶಸ್ತಿ ಪತ್ರ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು