ಡೈಲಿವಾರ್ತೆ:16/ಸೆ./2026

ಸಾರ್ವಜನಿಕ ಸ್ಥಳದಲ್ಲೇ ಯುವತಿಗೆ ಕಿರುಕುಳ: ಅಕ್ಕ ಪಡೆ ದಾಳಿ – ಯುವಕ ಪೊಲೀಸ್ ವಶಕ್ಕೆ

ಶಿವಮೊಗ್ಗ: ನಗರದ ಪ್ರಮುಖ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಕ್ಕ ಪಡೆ ನಡೆಸುತ್ತಿರುವ ಗಸ್ತು ಕಾರ್ಯಾಚರಣೆಯ ವೇಳೆ ಯುವತಿಗೆ ಸಾರ್ವಜನಿಕವಾಗಿ ಉಪಟಳ ನೀಡುತ್ತಿದ್ದ ಯುವಕನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.

ಸೆಪ್ಟೆಂಬರ್ 15ರಂದು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಕ್ಕ ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ, ಯುವಕನೊಬ್ಬ ಸಾರ್ವಜನಿಕವಾಗಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿ ಉಪಟಳ ನೀಡುತ್ತಿರುವುದು ಗಮನಕ್ಕೆ ಬಂದಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಅಕ್ಕ ಪಡೆಯ ಸಿಬ್ಬಂದಿ ಯುವಕನನ್ನು ಸ್ಥಳದಲ್ಲೇ ವಶಕ್ಕೆ ಪಡೆದು ಬಳಿಕ ದೊಡ್ಡಪೇಟೆ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಈ ಸಂಬಂಧ ಆರೋಪಿಯ ವಿರುದ್ಧ ಲಘು ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಅಕ್ಕ ಪಡೆಯ ಗಸ್ತು ಕಾರ್ಯಾಚರಣೆ ಮುಂದುವರಿದಿದೆ.