ಡೈಲಿವಾರ್ತೆ:17/ಸೆ./2026

ಭೂ ದಾಖಲೆ ತಿದ್ದುಪಡಿಗೆ 50 ಲಕ್ಷ ರೂ. ಲಂಚ ಸ್ವೀಕರ: ಧಾರವಾಡ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

ಧಾರವಾಡ: ಕೋಟ್ಯಂತರ ರೂ. ಮೌಲ್ಯದ ಖರಾಬು ಜಮೀನಿನ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಡುವುದಾಗಿ ಹೇಳಿ 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಧಾರವಾಡ-ಕಲಘಟಗಿ ರಸ್ತೆಯ ಮಧ್ಯಭಾಗದಲ್ಲಿರುವ ಯರಿಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಒಟ್ಟು 33 ಎಕರೆ ಜಮೀನಿದ್ದು, ಈ ಪೈಕಿ 13 ಎಕರೆ ಖರಾಬು ಜಮೀನು ಎಂದು ಹೇಳಲಾಗಿದೆ. ಖರಾಬು ಜಮೀನಿನ ಪಹಣಿ ಹಾಗೂ ಸಂಬಂಧಿತ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಡಲು ತಹಶೀಲ್ದಾರ್ 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಇದೇ ಜಮೀನಿನಲ್ಲಿನ 2 ಎಕರೆ ಭೂಮಿಯನ್ನು ತಮ್ಮದಾಗಿಸಿಕೊಳ್ಳಲು ಸಂಚು ರೂಪಿಸಿದ್ದರು ಎಂಬ ಆರೋಪವೂ ಕೇಳಿಬಂದಿದೆ.

ಬಾಗಲಕೋಟೆ ಮೂಲದ ಮಂಜುನಾಥ ಅರಳಿಕಟ್ಟಿ ಅವರು ಧಾರವಾಡದ ಯರಿಕೊಪ್ಪ ಹದ್ದಿನಲ್ಲಿ ಖರೀದಿಸಿದ್ದ ಜಮೀನಿನ ಖರಾಬು ಪಹಣಿ ಸರಿಪಡಿಸುವಂತೆ ತಹಶೀಲ್ದಾರ್ ಅವರನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಈ ವೇಳೆ ದಾಖಲೆ ತಿದ್ದುಪಡಿಗಾಗಿ 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಲಾಗಿದೆ.

ದೂರು ಆಧರಿಸಿ ಕಾರ್ಯಾಚರಣೆಗೆ ಮುಂದಾದ ಲೋಕಾಯುಕ್ತ ಅಧಿಕಾರಿಗಳು, ಬುಧವಾರ ರಾತ್ರಿ ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಡಿವೈಎಸ್‌ಪಿ ರವೀಂದ್ರ ಕುರುಬಗಟ್ಟಿ, ಇನ್ಸ್‌ಪೆಕ್ಟರ್‌ಗಳಾದ ಪ್ರಸಾದ್, ಕರುಣೇಶಗೌಡ, ಪ್ರಸಾದ್ ಪಾನೇಕರ್ ಸೇರಿದಂತೆ ಅಧಿಕಾರಿಗಳು ಪಾಲ್ಗೊಂಡಿದ್ದರು. ತಹಶೀಲ್ದಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಪೂಜೆಗೆ ಸಿದ್ಧತೆ; ಲಂಚ ಪ್ರಕರಣದಲ್ಲಿ ತಹಶೀಲ್ದಾರ್ ಬಂಧನ
ಇನ್ನೊಂದೆಡೆ, ತಹಶೀಲ್ದಾರ್ ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ ಆಯೋಜಿಸಲಾಗಿತ್ತು ಎನ್ನಲಾಗಿದೆ. ಪೂಜೆಯ ಅಂಗವಾಗಿ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸುಮಾರು 2,000 ಜನರಿಗೆ ಊಟ ಸಿದ್ಧಪಡಿಸುವ ವ್ಯವಸ್ಥೆ ಮಾಡಲಾಗಿದ್ದು, ರಾತ್ರಿ ಅಡುಗೆ ತಯಾರಿಸಲು ಬಾಣಸಿಗರನ್ನು ಸಹ ಕರೆಸಲಾಗಿತ್ತು ಎಂದು ತಿಳಿದುಬಂದಿದೆ.
ಈ ಸಿದ್ಧತೆಗಳ ನಡುವೆಯೇ ಭೂ ದಾಖಲೆ ತಿದ್ದುಪಡಿಗೆ 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಆರೋಪದಲ್ಲಿ ತಹಶೀಲ್ದಾರ್ ಲೋಕಾಯುಕ್ತರ ಬಲೆಗೆ ಬಿದ್ದಿರುವುದು ಧಾರವಾಡದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.