


ಡೈಲಿವಾರ್ತೆ:17/ಸೆ./2026

ಕೋಡಿಕನ್ಯಾಣ ಗಣೇಶೋತ್ಸವ ಮೆರವಣಿಗೆಗೆ ಮುಸ್ಲಿಂ ಬಾಂಧವರಿಂದ ಸೌಹಾರ್ದ ಸ್ವಾಗತ: ಸಿಹಿ ಹಂಚಿ ಭಾವೈಕ್ಯತೆಯ ಸಂದೇಶ

ಕೋಟ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಕನ್ಯಾಣ ವತಿಯಿಂದ ಆಯೋಜಿಸಲಾಗಿದ್ದ 30ನೇ ವರ್ಷದ ಗಣೇಶೋತ್ಸವದ ಅಂಗವಾಗಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆಗೆ ಕೋಡಿಕನ್ಯಾಣದ ಮುಸ್ಲಿಂ ಬಾಂಧವರು ಸೌಹಾರ್ದಯುತ ಸ್ವಾಗತ ನೀಡುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು.

ಕೋಡಿಯಿಂದ ಕೋಡಿಕನ್ಯಾಣದತ್ತ ಸಾಗಿದ ಗಣೇಶ ವಿಸರ್ಜನಾ ಮೆರವಣಿಗೆಯನ್ನು ಮುಸ್ಲಿಂ ಬಾಂಧವರು ಆತ್ಮೀಯವಾಗಿ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಬಾಂಧವರಿಗೆ ಐಸ್‌ಕ್ರೀಮ್ ಹಾಗೂ ಲಾಡು ವಿತರಿಸಿ, ಪರಸ್ಪರ ಪ್ರೀತಿ, ಸಹಬಾಳ್ವೆ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರಿದರು.


ಧಾರ್ಮಿಕ ಆಚರಣೆಗಳು ಪರಸ್ಪರ ಗೌರವ ಮತ್ತು ಸಹೋದರತ್ವದೊಂದಿಗೆ ಸಾಗಬೇಕು ಎಂಬುದಕ್ಕೆ ಈ ಸಂದರ್ಭ ಸಾಕ್ಷಿಯಾಯಿತು. ಯಾವುದೇ ಭೇದಭಾವವಿಲ್ಲದೆ ಪರಸ್ಪರರ ಹಬ್ಬ-ಆಚರಣೆಗಳಲ್ಲಿ ಸೌಹಾರ್ದಯುತವಾಗಿ ಭಾಗವಹಿಸುವ ಮೂಲಕ ಕೋಡಿಕನ್ಯಾಣದ ಮುಸ್ಲಿಂ ಬಾಂಧವರು ಸಮಾಜಕ್ಕೆ ಭಾವೈಕ್ಯತೆಯ ಮಾದರಿ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ತನ್ಸೀರ್, ಅಜರುದ್ದೀನ್, ತನ್ವೀರ್, ಫಿರೋಜ್, ಸುಹೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.