ಡೈಲಿವಾರ್ತೆ:17/ಸೆ./2026

ಕಲಬುರಗಿ: ಅನುಮತಿಯಿಲ್ಲದೆ ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಪ್ರತಿಷ್ಠಾಪನೆ – ಪಾಲಿಕೆಯಿಂದ ತೆರವು

ಕಲಬುರಗಿ: ನಗರದ ಹೈಕೋರ್ಟ್ ಕ್ರಾಸ್ ಬಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಯಾವುದೇ ಅನುಮತಿ ಪಡೆಯದೆ ರಾತ್ರೋರಾತ್ರಿ ಸ್ಥಾಪಿಸಿದ್ದ ಘಟನೆ ಬೆಳಕಿಗೆ ಬಂದಿದ್ದು, ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಪ್ರತಿಮೆಯನ್ನು ತೆರವುಗೊಳಿಸಿದ್ದಾರೆ.

ಸೆ.16ರ ರಾತ್ರಿ ಏಳೆಂಟು ಮಂದಿಯ ಗುಂಪೊಂದು ಏಕಾಏಕಿ ಪ್ರತಿಮೆಯನ್ನು ಸ್ಥಾಪಿಸಿದೆ ಎನ್ನಲಾಗಿದ್ದು, ಘಟನೆ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.

ಕಲಬುರಗಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೇ ಮಾರ್ಗವಾಗಿ ಸಂಚರಿಸಲಿರುವ ಸಂದರ್ಭದಲ್ಲಿ ಪ್ರತಿಮೆ ಸ್ಥಾಪನೆಯಾಗಿರುವುದು ಮತ್ತಷ್ಟು ಗಮನ ಸೆಳೆದಿದೆ.
ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯಲಾಗಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಬಳಿಕ ಪೊಲೀಸ್ ಭದ್ರತೆಯೊಂದಿಗೆ ಸ್ಥಳಕ್ಕೆ ತೆರಳಿದ ಪಾಲಿಕೆ ಸಿಬ್ಬಂದಿ ಪ್ರತಿಮೆಯನ್ನು ತೆರವುಗೊಳಿಸಿದರು.

ಇದೇ ವೇಳೆ ಎರಡು,ಮೂರು ವರ್ಷಗಳ ಹಿಂದೆ ಕೂಡ ನಗರದ ಇದೇ ಪ್ರದೇಶದಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರದ ಬ್ಯಾನರ್ ಅಳವಡಿಸಿ ‘ಸಿದ್ದರಾಮಯ್ಯ ಸರ್ಕಲ್’ ನಿರ್ಮಿಸಲಾಗಿತ್ತು. ಆ ಸಂದರ್ಭದಲ್ಲಿಯೂ ಅಗತ್ಯ ಅನುಮತಿ ಪಡೆಯಲಾಗಿರಲಿಲ್ಲ ಎನ್ನಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ನಿರ್ಮಾಣ ಅಥವಾ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ನಿಯಮಾನುಸಾರ ಅನುಮತಿ ಪಡೆಯಬೇಕಾಗಿದ್ದು, ಅನುಮತಿ ಇಲ್ಲದೆ ರಾತ್ರೋರಾತ್ರಿ ಪ್ರತಿಮೆ ಸ್ಥಾಪಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದಾರೆ.