


ಡೈಲಿವಾರ್ತೆ:17/ಸೆ./2026

ಮಂಗಳೂರಿನಲ್ಲಿ ಸಂಪುಟ ಸಭೆ: ಅಂತಿಮ ಹಂತದ ಸಿದ್ಧತೆಯನ್ನು ಮಾನ್ಯ ಉಸ್ತುವಾರಿ ಸಚಿವರಿಂದ ಪರಿಶೀಲನೆ

ಮಂಗಳೂರು: ರಾಜಧಾನಿಯ ಹೊರಗೆ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಶುಕ್ರವಾರ (ಸೆ.18) ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಗುರುವಾರ ಪಡೀಲ್‌ನ ‘ಪ್ರಜಾಸೌಧ’ಕ್ಕೆ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.
ಪ್ರಜಾಸೌಧದ ಎರಡನೇ ಮಹಡಿಯಲ್ಲಿ ಸಂಪುಟ ಸಭೆ ನಡೆಯಲಿದ್ದು, ಸಭಾಂಗಣದಲ್ಲಿ ಪೀಠೋಪಕರಣ, ಧ್ವನಿವರ್ಧಕ, ಎಲ್‌ಇಡಿ ಪರದೆ ಹಾಗೂ ಬೆಳಕಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಆವರಣದ ರಸ್ತೆಗಳು ಹಾಗೂ ಉದ್ಯಾನವನಗಳನ್ನು ಸ್ವಚ್ಛಗೊಳಿಸಿ ಅಲಂಕರಿಸಲಾಗುತ್ತಿದೆ.

ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಹಾಗೂ ಸಚಿವರು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ವಿಶೇಷ ಅಂಬಾರಿ ಓಪನ್‌ಟಾಪ್ ಡಬಲ್ ಡೆಕ್ಕರ್ ಬಸ್‌ನಲ್ಲಿ ಪಂಪ್‌ವೆಲ್‌ನಿಂದ ಪಡೀಲ್‌ವರೆಗೆ ಪ್ರಯಾಣಿಸಲಿದ್ದಾರೆ. ಮಾರ್ಗಮಧ್ಯೆ ಸಾರ್ವಜನಿಕರು ಹಾಗೂ ಕಾರ್ಯಕರ್ತರಿಂದ ಸ್ವಾಗತ ಸ್ವೀಕರಿಸಲಿದ್ದಾರೆ.
ಪ್ರಜಾಸೌಧಕ್ಕೆ ಆಗಮಿಸಿದ ಬಳಿಕ ಮುಖ್ಯಮಂತ್ರಿ ಹಾಗೂ ಸಚಿವರು ಮಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಸಂಪುಟ ಸಭೆಯ ಸವಿನೆನಪಿಗಾಗಿ ಆವರಣದಲ್ಲಿ 35 ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಸಚಿವ ಯು.ಟಿ. ಖಾದರ್ ಮಾತನಾಡಿ, ರಾಜಧಾನಿಯ ಹೊರಗೆ ಮಂಗಳೂರಿನಲ್ಲಿ ಇಡೀ ಸಂಪುಟ ಸಭೆ ಸೇರುತ್ತಿರುವುದು ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿ. ತುಳುನಾಡಿನ ಸಂಸ್ಕೃತಿ, ಸೌಹಾರ್ದತೆ ಹಾಗೂ ಆತಿಥ್ಯವನ್ನು ರಾಜ್ಯಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದರು.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ಮಿಥುನ್ ರೈ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.